ಐ ಎಂ ಎಫ್ ನಲ್ಲಿ ಗೀತಾ ಗೋಪಿನಾಥ್ ಗೆ ಪದೋನ್ನತಿ
ವಾಷಿಂಗ್ಟನ್,ಡಿ 3: ಅಂತಾರಾಷ್ಟ್ರೀಯ ಹಣಕಾಸು ನಿಧಿ ( ಐ ಎಂ ಎಫ್) ನ ಮುಖ್ಯ ಅರ್ಥಶಾಸ್ತ್ರಜ್ಞೆಯಾಗಿರುವ ಮೈಸೂರು ಮೂಲದ ಗೀತಾ ಗೋಪಿನಾಥ್ ಅವರಿಗೆ ಸಂಸ್ಥೆಯ ಪ್ರಥಮ ಉಪ ವ್ಯವಸ್ಥಾಪಕ ನಿರ್ದೇಶಕರಾಗಿ ಪದೋನ್ನತಿ ಕಲ್ಪಿಸಲಾಗುತ್ತಿದೆ ಎಂದು ಐಎಂಎಫ್ ಘೋಷಿಸಿದೆ.
ಈಗಾಗಲೇ ಮೂರು ವರ್ಷ ಸಂಸ್ಥೆಯಲ್ಲಿ ಮುಖ್ಯ ಅರ್ಥಶಾಸ್ತ್ರಜ್ಞರಾಗಿ ಸೇವೆ ಸಲ್ಲಿಸಿರುವ ಗೀತಾ ಗೋಪಿನಾಥ್ ಮುಂದಿನ ವರ್ಷದ ಆರಂಭದಲ್ಲಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ. ಜೆಫ್ರಿ ಒಕಾಮೊಟೊ ಅವರ ರಾಜೀನಾಮೆಯಿಂದ ತೆರವಾಗಿರುವ ಪ್ರಥಮ ಉಪ ವ್ಯವಸ್ಥಾಪಕ ನಿರ್ದೇಶಕ ಸ್ಥಾನಕ್ಕೆ ಗೀತಾ ಗೋಪಿನಾಥನ್ ಸೇರ್ಪಡೆಯಾಗಲಿದ್ದಾರೆ.
ಈ ಸಂಬಂಧ ಪ್ರತಿಕ್ರಿಯಿಸಿರುವ ಅಂತಾರಾಷ್ಟ್ರೀಯ ಹಣಕಾಸು ನಿಧಿ ವ್ಯವಸ್ಥಾಪಕ ನಿರ್ದೇಶಕಿ ಕ್ರಿಸ್ಟಲಿನಾ ಜಾರ್ಜಿವಾ, 'ಜೆಫ್ರಿ ಹಾಗೂ ಗೀತಾ ಇಬ್ಬರೂ ನನಗೆ ಒಳ್ಳೆಯ ಸಹೋದ್ಯೋಗಿಗಳು. ಜೆಫ್ರಿ ಸಂಸ್ಥೆ ತೊರೆದಿರುವುದಕ್ಕೆ ತಮಗೆ ತುಂಬಾ ಬೇಸರವಾಗುತ್ತಿದೆ. ಗೀತಾ ಹೊಸ ಜವಾಬ್ದಾರಿ ಸ್ವೀಕರಿಸಲು ಒಪ್ಪಿಕೊಂಡಿದ್ದಾರೆ ಎಂಬುದು ಸಂತೋಷ ತಂದಿದೆ' ಎಂದು ಹೇಳಿದ್ದಾರೆ.