ಕಬ್ಬು ನುರಿಸುವಿಕೆಯಲ್ಲಿ ಸಾಯಿ ಪ್ರಿಯಾ ಕಾರ್ಖಾನೆ ದಾಖಲೆ : ಸಂಗಮೇಶ ನಿರಾಣಿ
ರಬಕವಿ-ಬನಹಟ್ಟಿ 28: ಈ ವರ್ಷ ಕೇವಲ 122 ದಿನಗಳಲ್ಲಿ 14,45,000 ಟನ್ ಕಬ್ಬು ನುರಿಸುವ ಮೂಲಕ ಸಾಯಿ ಪ್ರಿಯಾ ಕಾರ್ಖಾನೆ ವಿನೂತನ ವಿಕ್ರಮ ದಾಖಲೆ ನಿರ್ಮಿಸಿದೆ ಎಂದು ಕಾರ್ಯನಿರ್ವಾಹಕ ನಿರ್ದೇಶಕ ಸಂಗಮೇಶ ನಿರಾಣಿ ಹೇಳಿದರು.
ಸಮೀಪದ ಶ್ರೀ ಸಾಯಿ ಪ್ರಿಯಾ ಶುಗರ್ಸದಲ್ಲಿ ಪ್ರಸಕ್ತ ಹಂಗಾಮಿನ ಮುಕ್ತಾಯ ಸಮಾರಂಭದಲ್ಲಿ ಮಾತನಾಡಿದ ಸಂಗಮೇಶ ನಿರಾಣಿ, ಕಾರ್ಖಾನೆಯ ಶ್ರೇಯೋಭಿವೃದ್ಧಿಗೆ ಕಾರಣರಾದ ರೈತರ ಸಹಕಾರ ಮುಂದಿನ ದಿನಗಳಲ್ಲಿ ಕೂಡ ಹೀಗೆ ಮುಂದುವರಿಯಲಿ, ರೈತರ ಆದಾಯ ದ್ವಿಗುಣವಾಗಲಿ, ದುಡಿಯುವ ಕೈಗಳಿಗೆ ಉದ್ಯೋಗ ಸಿಗುವಂತಾಗಲಿ ಮತ್ತು ತಮ್ಮೆಲ್ಲರ ಕೃಪೆಯಿಂದ ನಿರಾಣಿ ಉದ್ಯಮ ಸಮೂಹ ದೇಶದಲ್ಲೆ ಅತಿ ಹೆಚ್ಚು ನುರಿಸುವ ಸಂಸ್ಥೆಯಾಗಿ ಬೆಳೆಯಲಿ ಎಂದು ಹೇಳಿದರು.
ಈ ಸಂದರ್ಭದಲ್ಲಿ ಅತ್ಯಧಿಕ ಕಬ್ಬು ಪೂರೈಸಿದ 3 ಜನ ರೈತರನ್ನು ಮತ್ತು 28 ವಲಯವಾರು ಅತಿ ಹೆಚ್ಚು ಕಬ್ಬು ಸಾಗಣೆ ಮಾಡಿದ ತಲಾ 3 ಸಾಗಣೆದಾರರನ್ನು ಕಾರ್ಯನಿರ್ವಾಹಕ ನಿರ್ದೇಶಕ ಸಂಗಮೇಶ ನಿರಾಣಿ ಸನ್ಮಾನಿಸಿದರು.
ಈ ಸಾಧನೆಗೆ ಕಾರಣೀಭೂತರಾದ ಕಬ್ಬು ಪೂರೈಸಿದ ಎಲ್ಲ ರೈತರನ್ನು, ಕಬ್ಬು ವಿಭಾಗದ ಹಿರಿಯ ಪ್ರಬಂಧಕ ವಿ. ಪಿ. ಚೌಗಲೆಯವರು ಮತ್ತು ಸಿಬ್ಬಂದಿ ಹಾಗೂ ಒಂದೇ ಮಿಲ್ ಇದ್ದರೂ ಯಾವುದೇ ತಡೆ ಇಲ್ಲದೆ ಸಮರ್ಪಕವಾಗಿ ಕಬ್ಬು ನುರಿಸಿದ ತಾಂತ್ರಿಕ ನಿರ್ದೇಶಕ ಪ್ರಶಾಂತ ಕುಲಕರ್ಣಿ ಮತ್ತು ಸಿಬ್ಬಂದಿಯವರನ್ನು ಸಂಗಮೇಶ ನಿರಾಣಿಯವರು ಮುಕ್ತ ಕಂಠದಿಂದ ಶ್ಲಾಘಿಸಿದರು.
ಸಮಾರಂಭದ ಸಾನಿಧ್ಯವನ್ನು ಶ್ರೀ ಗಿರೀಶ ದೇವರು ಮುತ್ತೂರ ಇವರು ವಹಿಸಿದ್ದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬನಹಟ್ಟಿ ಪಿ.ಕೆ.ಪಿ.ಎಸ್. ಅಧ್ಯಕ್ಷ ಭೀಮಸಿ ಮಗದುಮ ವಹಿಸಿದ್ದರು.
ವೇದಿಕೆಯ ಮೇಲೆ ರುದ್ರಪ್ಪಜ್ಜ ನಿರಾಣಿ, ರಾಮಣ್ಣ ಹಿಪ್ಪರಗಿ, ದುಂಡಪ್ಪ ಪಾಟೀಲ, ಸೋಮನಾಥಗೌಡರು, ಭೀಮಣ್ಣ ಹಿಪ್ಪರಗಿ ವೇದಿಕೆ ಮೇಲಿದ್ದರು. ಈ ಭಾಗದ ಸಮಸ್ತ ರೈತ ಬಾಂಧವರು, ಕಾರ್ಖಾನೆಯ ಆಡಳಿತ ಮಂಡಳಿ, ಅಧಿಕಾರಿ ವರ್ಗ ಮತ್ತು ಸಿಬ್ಬಂದಿಯವರು ಉಪಸ್ಥಿತರಿದ್ದರು.