ಅಂತರರಾಷ್ಟ್ರೀಯ

ಪಾಕ್‌ನಲ್ಲಿ ರಾಜಕೀಯ ಬಿಕ್ಕಟ್ಟು: ಸಂಸತ್ ವಿಸರ್ಜಿಸಿದ ಅಧ್ಯಕ್ಷ : 90 ದಿನಗಳಲ್ಲಿ ಚುನಾವಣೆ

ಪಾಕ್‌ನಲ್ಲಿ ರಾಜಕೀಯ ಬಿಕ್ಕಟ್ಟು: ಸಂಸತ್ ವಿಸರ್ಜಿಸಿದ ಅಧ್ಯಕ್ಷ : 90 ದಿನಗಳಲ್ಲಿ ಚುನಾವಣೆ

ಇಸ್ಲಾಮಾಬಾದ್ 03 :  ಪ್ರಧಾನಿ ಇಮ್ರಾನ್ ಖಾನ್ ಶಿಫಾರಸಿನ ಮೇರೆಗೆ ಪಾಕಿಸ್ತಾನದ ಸಂಸತ್ ಅನ್ನು ವಿಸರ್ಜಿಸಲಾಗಿದೆ. ಅಲ್ಲದೆ, 90 ದಿನಗಳಲ್ಲಿ ಚುನಾವಣೆ ನಡೆಸುವಂತೆ ಪಾಕ್ ಅಧ್ಯಕ್ಷ ಆರೀಫ್ ಅಲ್ವಿ ಸೂಚಿಸಿದ್ದಾರೆ.ಇದಕ್ಕೂ ಮುನ್ನ ಪಾಕಿಸ್ತಾನದ ನ್ಯಾಷನಲ್ ಅಸೆಂಬ್ಲಿಯಲ್ಲಿ ಹೈಡ್ರಾಮಾವೇ ನಡೆದು ಹೋಯಿತು. ವಿಪಕ್ಷಗಳು ಮಂಡಿಸಿದ್ದ ಅವಿಶ್ವಾಸ ನಿರ್ಣಯವನ್ನು ಮತದಾನವಿಲ್ಲದೆ ತಿರಸ್ಕಾರ ಮಾಡಲಾಯಿತು. ನ್ಯಾಷನಲ್ ಅಸೆಂಬ್ಲಿ ಡೆಪ್ಯುಟಿ ಸ್ಪೀಕರ್ ಖಾಸಿಂ ಖಾನ್ ಸೂರಿ ಅವರು ಪಾಕಿಸ್ತಾನದ ಸಂವಿಧಾನದ 5ನೇ ವಿಧಿಯನ್ನು ಉಲ್ಲೇಖಿಸಿ ಅವಿಶ್ವಾಸ ನಿರ್ಣಯವನ್ನು ತಿರಸ್ಕರಿಸಿದರು. ನ್ಯಾಶನಲ್ ಅಸೆಂಬ್ಲಿ ಸ್ಪೀಕರ್ ಅಸಾದ್ ಕೈಸರ್ ವಿರುದ್ಧವೂ ಪ್ರತಿಪಕ್ಷಗಳು ಅವಿಶ್ವಾಸ ನಿರ್ಣಯ ಮಂಡಿಸಿದ ಬಳಿಕ ಡೆಪ್ಯುಟಿ ಸ್ಪೀಕರ್ ಸೂರಿ ಇಂದು ಸದನದ ಉಸ್ತುವಾರಿ ವಹಿಸಿಕೊಂಡರು. ಅವಿಶ್ವಾಸ ನಿರ್ಣಯ ತಿರಸ್ಕೃತಗೊಂಡ ನಂತರ ನ್ಯಾಷನಲ್ ಅಸೆಂಬ್ಲಿಯನ್ನು ಏಪ್ರಿಲ್ 25ಕ್ಕೆ ಮುಂದೂಡಲಾಯಿತು. ಈ ವೇಳೆ ಆಕ್ರೋಶಭರಿತ ವಿರೋಧ ಪಕ್ಷದ ಸಂಸದರು, ನ್ಯಾಷನಲ್ ಅಸೆಂಬ್ಲಿಯ ಮುಂದೆ ಧರಣಿ ಕುಳಿತರು.

ಸುಪ್ರೀಂಕೋರ್ಟ್ ಗೆ ಪ್ರಕರಣ
ಡೆಪ್ಯುಟಿ ಸ್ಪೀಕರ್ ಕೈಗೊಂಡ ನಿರ್ಧಾರದಿಂದ ಆಕ್ರೋಶಗೊಂಡ ಪ್ರತಿಪಕ್ಷಗಳು ಪಾಕಿಸ್ತಾನದ ಸುಪ್ರೀಂಕೋರ್ಟ್ ನ ಮೆಟ್ಟಿಲು ಏರಿವೆ. ಪ್ರತಿಪಕ್ಷಗಳ ದೂರಿನ ನಂತರ ಸುಪ್ರೀಂ ಕೋರ್ಟ್ ವಿಚಾರಣೆಗೆ ವಿಶೇಷ ಪೀಠವನ್ನು ರಚಿಸಿದೆ.

ಸಂಸತ್ ವಿಸರ್ಜನೆಗೆ ಶಿಫಾರಸು
ಪ್ರಧಾನಿ ಇಮ್ರಾನ್ ಖಾನ್ ವಿರುದ್ಧದ ಅವಿಶ್ವಾಸ ನಿರ್ಣಯವನ್ನು ಸಂಸತ್ತು ತಿರಸ್ಕರಿಸಿದ ಬಳಿಕ ಪಾಕಿಸ್ತಾನದ ಜನರನ್ನು ಉದ್ದೇಶಿಸಿ ಮಾತನಾಡಿದ ಇಮ್ರಾನ್ ಖಾನ್, ಸ್ಪೀಕರ್ ನಿರ್ಧಾರಕ್ಕೆ ನಾನು ಪ್ರತಿಯೊಬ್ಬ ಪಾಕಿಸ್ತಾನಿಯನ್ನು ಅಭಿನಂದಿಸುತ್ತೇನೆ ಎಂದು ಹೇಳಿದರು. ಅವಿಶ್ವಾಸ ನಿರ್ಣಯವು ನಮ್ಮ ವಿರುದ್ಧದ ವಿದೇಶಿ ಷಡ್ಯಂತ್ರವಾಗಿದೆ. ಅವರನ್ನು ಯಾರು ಆಳುತ್ತಾರೆ ಎಂಬುದನ್ನು ಪಾಕಿಸ್ತಾನ ನಿರ್ಧರಿಸಬೇಕು. ಇದನ್ನು ನಿರ್ಧರಿಸುವ ಹಕ್ಕು ಯಾವುದೇ ವಿದೇಶಿ ಶಕ್ತಿಗೆ ಇಲ್ಲ. ವಿಧಾನಸಭೆ ವಿಸರ್ಜಿಸುವಂತೆ ರಾಷ್ಟ್ರಪತಿಗಳಿಗೆ ಪತ್ರ ಬರೆದಿದ್ದೇನೆ. ಪ್ರಜಾಸತ್ತಾತ್ಮಕವಾಗಿ ಚುನಾವಣೆ ನಡೆಯಬೇಕು. ಚುನಾವಣೆಗೆ ತಯಾರಿ ನಡೆಸುವಂತೆ ಪಾಕಿಸ್ತಾನದ ಜನತೆಗೆ ನಾನು ಕರೆ ನೀಡುತ್ತೇನೆ ಎಂದು ತಿಳಿಸಿದರು.

90 ದಿನಗಳಲ್ಲಿ ಚುನಾವಣೆ
ಪಾಕಿಸ್ತಾನದ ಮಾಹಿತಿ ಮತ್ತು ಪ್ರಸಾರ ಸಚಿವಾಲಯದ ವರದಿ ಪ್ರಕಾರ, ಪಾಕಿಸ್ತಾನದಲ್ಲಿ ಮುಂದಿನ ಸಾರ್ವತ್ರಿಕ ಚುನಾವಣೆಗಳು 90 ದಿನಗಳಲ್ಲಿ ನಡೆಯಲಿದೆ ಎಂದು ಹೇಳಲಾಗಿದೆ.

ಸುದ್ದಿ ಓದಿ