ಮಳೆ ನೀರು ಮನೆಗಳಿಗೆ ನುಗ್ಗುತ್ತಿರುವದರಿಂದ ಕೆಂಗೆಟ್ಟ ಜನತೆ: ಅಧಿಕಾರಿ ತರಾಟೆಗೆ
ಚನ್ನಮ್ಮನ ಕಿತ್ತೂರು 26: ಪಟ್ಟಣದಲ್ಲಿನ ಗಟಾರುಗಳಿಂದ ಮಳೆ ನೀರು ಮುಂದೆ ಹೋಗದೆ ಮನೆಗಳಲ್ಲಿ ನುಗ್ಗುತ್ತಿರುವದರಿಂದ ಕೆಂಗೆಟ್ಟ ಸೋಮವಾರ ಪೇಠೆಯ ಬಸವನಗರದ ನಿವಾಸಿಗಳು ಲೋಕೊಪಯೋಗಿ ಇಲಾಖೆಯ ಅಧಿಕಾರಿಗೆ ಶನಿವಾರ ತರಾಟೆಗೆ ತೆಗೆದುಕೊಂಡರು.
ಸ್ಥಳೀಯ ಸೋಮವಾರ ಪೇಠೆಯ ಬಸವೇಶ್ವರ ನಗರದ ಸುಮಾರು ಮೂರು ಓಣಿಗಳಲ್ಲಿ ಮಳೆಯಾಯಿತೆಂದರೆ ಪಟ್ಟಣದಲ್ಲಿನ ಮಳೆ ನೀರು ಬಂದು ನಮ್ಮ ನಗರವನ್ನು ಆಕ್ರಮಿಸುತ್ತದೆ. ನೀರಿನಿಂದ ಆವೃತವಾಗಿ ನೀರು ಮುಂದೆ ಸಾಗದೆ ಇಲ್ಲಿಯೇ ಸಂಗ್ರಹವಾಗುತ್ತದೆ ಮುಂದೆ ಸಾಗಲು ಸೂಕ್ತ ಗಟಾರ ವ್ಯವಸ್ಥೆ ಇಲ್ಲದ ಕಾರಣ ಇಲ್ಲಿನ ನಿವಾಸಿಗಳು ನರಕಯಾತನೆ ಅನುಭವಿಸುವ ಪರಿಸ್ಥಿತಿ ನಿರ್ಮಾಣವಾಗಿದೆ. ಸಂಗ್ರಹವಾದ ನೀರು ಕಡಿಮೆಯಾದನಂತರ ಮನೆ ಸೇರಬೇಕಾದ ಅನಿವಾರ್ಯತೆ ಇದೆ ಹೀಗಾದರೆ ನಾವು ಬದುಕುವದಾದರೂ ಹೇಗೆ ಇದರ ಬಗ್ಗೆ ಹಲವಾರು ಬಾರಿ ಅಧಿಕಾರಿಗಳಿಗೆ ಮನವಿ ಮಾಡಿದರೂ ಇದರ ಬಗ್ಗೆ ಕಿಂಚಿತ್ತು ಕಾಳಜಿ ವಹಿಸುತ್ತಿಲ್ಲ. ಲೋಕೋಪಯೋಗಿ ಇಲಾಖೆ ವ್ಯಾಪ್ತಿಯಲ್ಲಿ ಬರುವ ಈ ರಸ್ತೆ ರಾಜ್ಯ ಹೆದ್ದಾರಿಯಾಗಿದೆ. ಆದ್ದರಿಂದ ಅಧಿಕಾರಿಗಳು ಬೇಗನೆ ನಮ್ಮ ಸಮಸ್ಯೆಯನ್ನು ಸರಿಪಡಿಸಬೇಕೆಂದು ಆಗ್ರಹಿಸಿದರು ಒಂದು ವೇಳೆ ಬೇಗನೆ ಸರಿಪಡಿಸದಿದ್ದರೆ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಕಿರಣ ವಾಳದ, ಗೋಪಾಲ ಪತಂಗೆ, ಮಡಿವಾಳಪ್ಪ ಸರಪಳಿ ಸೇರಿದಂತೆ ಹಲವರು ಸೇರಿ ಅಧಿಕಾರಿಗಳಿಗೆ ಎಚ್ಚರಿಕೆಯನ್ನು ನೀಡಿದರು.
ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯ ನಿರ್ವಾಹಕ ಅಭಿಯಂತರ ಸಂಜೀವ ಮಿರಜಕರ ಮಾತನಾಡಿ, ಈ ಸಮಸ್ಯೆಯನ್ನು ಪಟ್ಟಣ ಪಂಚಾಯತಿ ಅಧಿಕಾರಿಗಳು ಹಾಗೂ ನಮ್ಮ ಇಲಾಖೆ, ಸಾರ್ವಜನಿಕರು ಸೇರಿ ಎಲ್ಲರ ಸಹಬಾಗಿತ್ವದಲ್ಲಿ ಸೇರಿ ಸಮಸ್ಯೆಯನ್ನು ಇಥ್ಯರ್ತಪಡಿಸೋಣವೆಂದು ಸಾರ್ವಜನಿಕರಿಗೆ ಮನವರಿಕೆ ಮಾಡಿದರು.
ಎಸ್ ಬಿ ವಾಳದ, ಗಿರಿಮಲ್ಲಪ್ಪ ಹೊಸೆಟ್ಟಿ, ಶ್ರೀಕಾಂತ ಅವಲಕ್ಕಿ, ಕಾಂತು ಆರೇರ ಸೇರಿದಂತೆ ಹಲವರು ಉಪಸ್ಥಿತರಿದ್ದರು.