ಅಭಿವೃದ್ಧಿ ಕಾಮಗಾರಿಗಳ ಕಡೆಗೆ ವಿಶೇಷ ಗಮನ ನೀಡಿ : ಉಪಸಭಾಧ್ಯಕ್ಷ ಆನಂದ ಮಾಮನಿ ಅಧಿಕಾರಿಗಳಿಗೆ ಸೂಚನೆ: ಪ್ರಗತಿ ಪರೀಶೀಲನಾ ಸಭೆ
ಲೋಕದರ್ಶನ ವರದಿ
ಸವದತ್ತಿ 02: ಸಾರ್ವಜನಿಕ ವಲಯದಲ್ಲಿ ನಡೆಯಬೇಕಾಗಿರುವ ಅಭಿವೃದ್ಧಿ ಕಾಮಗಾರಿಗಳ ಕಡೆಗೆ ವಿಶೇಷ ಗಮನ ನೀಡಬೇಕಿದ್ದು, ಅಂಗನವಾಡಿ ಕಟ್ಟಡ, ನರೇಗಾ ಮತ್ತು ಬೆಳಕು ಯೋಜನೆಯಡಿ ಜನಸಾಮಾನ್ಯರಿಗೆ ದೊರಬೇಕಾದ ಸೌಲಭ್ಯಗಳನ್ನು ಕಲ್ಪಿಸುವ ನಿಟ್ಟಿನಲ್ಲಿ ಸಂಬಂಧಿಸಿದ ಅಧಿಕಾರಿಗಳ ಸಭೆಯನ್ನು ಬರುವ ಅಧಿವೇಶನದೊಳಗೆ ಕರೆಯಲು ವಿಧಾನಸಭೆ ಉಪಸಭಾಧ್ಯಕ್ಷ ಆನಂದ ಮಾಮನಿ ಅಧಿಕಾರಿಗಳಿಗೆ ಸೂಚನೆ ನೀಡಿದರು.
ತಾ.ಪಂ ಸಭಾಭವನದಲ್ಲಿ ಮಂಗಳವಾರದಂದು ನಡೆದ ಪ್ರಗತಿ ಪರೀಶೀಲನಾ ಸಭೆಯಲ್ಲಿ ಅವರು ಮಾತನಾಡಿದರು.
ಗ್ರಾಮೀಣ ಭಾಗದಲ್ಲಿ ಸೂಕ್ತ ವಿದ್ಯುತ್ತ ಪೂರೈಕೆಗೆ 110 ಕೆವಿ ಸಾಮರ್ಥ್ಯದ ಘಟಕಗಳು ಮಂಜೂರಾಗಿದ್ದು, ಕೆಲವೆಡೆ ಸ್ಥಳದ ಅಭಾವ ಕಂಡು ಬರುತ್ತಿರುವದರಿಂದ ತಹಸೀಲ್ದಾರರು, ಹೆಸ್ಕಾಂ ಅಧಿಕಾರಿಗಳು ಮತ್ತು ತಾ.ಪಂ ಇಓ ಹಾಗೂ ಆಯಾ ಪಂಚಾಯತಿಯ ಪಿಡಿಓಗಳು ಸ್ಥಳ ಪರೀಶೀಲನೆ ಮಾಡಿ ಕೂಡಲೆ ಘಟಕ ನಿರ್ಮಾಣಕ್ಕೆ ಸಹಕಾರ ತೋರಬೇಕೆಂದರು. ತಾಲೂಕಿನಲ್ಲಿ ವಿದ್ಯುತ್ತ ಸಂಪರ್ಕ ಇಲ್ಲದಂತ ಮನೆಗಳನ್ನು ಗುರುತಿಸಿ ಅವರಿಗೆ ಬೆಳಕು ಯೋಜನೆಯಡಿ ವಿದ್ಯುತ್ತ ಸಂಪರ್ಕ ಕಲ್ಪಿಸುವ ವ್ಯವಸ್ಥೆಯನ್ನು ಅಧಿಕಾರಿಗಳು ಮಾಡಬೇಕೆಂದರು.
ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆಯಡಿ ರಸ್ತೆಗಳನ್ನು ಅಭಿವೃದ್ದಿಪಡಿಸುವ ನಿಟ್ಟಿನಲ್ಲಿ ಅಧಿಕಾರಿಗಳು ಆಯಾ ರಸ್ತೆಗಳ ಮಾಹಿತಿಯನ್ನು ತಕ್ಷಣ ನೀಡಬೇಕಿದ್ದು, ತಾಲೂಕಿನಾದ್ಯಂತ 150 ಕಿ.ಮೀ ನಷ್ಟು ರಸ್ತೆಗಳನ್ನು ಅಭಿವೃದ್ದಿಪಡಿಸುವ ಗುರಿ ಹೊಂದಲಾಗಿದೆ ಎಂದರು. ಪಶು ವೈದ್ಯಕೀಯ ಇಲಾಖೆಯಲ್ಲಿ ಖಾಲಿ ಇರುವಂತ ಹುದ್ದೆಗಳ ಮಾಹಿತಿಯನ್ನು ತಕ್ಷಣ ನೀಡಬೇಕೆಂದು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.
ಬೈಲಹೊಂಗಲ ಶಾಸಕ ಮಹಾಂತೇಶ ಕೌಜಲಗಿ ಮಾತನಾಡಿ, ಅರಣ್ಯ ಇಲಾಖೆಯವರು 13 ಸಾವಿರ ಎಕರೆ ಪ್ರದೇಶದಲ್ಲಿ ಅರಣ್ಯ ಅಭಿವೃದ್ದಿ ಮಾಡಿರುವದಾಗಿ ಹೇಳುತ್ತಿದ್ದು, ಇದರಲ್ಲಿ ಎಲ್ಲಿಯಾದರೂ ಒಂದು ಕಡೆಗೆ ಸರಿಯಾಗಿದೆ ಎಂಬುದನ್ನು ತೋರಿಸಿಕೊಡಲಿ ಎಂದರು. ಶುದ್ದ ಕುಡಿಯುವ ನೀರಿನ ಘಟಕಗಳು ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲದಾಗಿದ್ದು, ಅದರ ನಿರ್ವಹಣೆ ಮಾಡುವವರ ನಿಷ್ಕಾಳಜಿ ಇಲ್ಲಿ ಎದ್ದು ಕಾಣುತ್ತಿದೆ. ನಾವೇ ಫೋನ ಮಾಡಿದರೂ ಅವರಿಗೆ ಫೋನ ಕರೆ ಸ್ವೀಕರಿಸುವ ಸಾಮಾನ್ಯ ಜ್ಞಾನ ಇಲ್ಲದಾಗಿದೆ ಎಂದರು.
ಸಿಡಿಪಿಓ ಕಾಂಚನಾ ಅಮಠೆ ಮಾತನಾಡಿ, ತಾಲೂಕಿನಲ್ಲಿ 343 ಅಂಗನವಾಡಿ ಕೇಂದ್ರಗಳಿದ್ದು, ಅದರಲ್ಲಿ 21 ಕೇಂದ್ರಗಳು ಬಾಡಿಗೆ ಜಾಗೆಯಲ್ಲಿ ಕಾರ್ಯನಿರ್ವಹಿಸುತ್ತಿರುವದರಿಂದ ಅವುಗಳಿಗೆ ಸ್ಥಳಾವಕಾಶ ನೀಡಿ ಸ್ವಂತ ಕಟ್ಟಡ ಕಟ್ಟಲು ಅವಕಾಶ ಮಾಡಿಕೊಡಬೇಕೆಂದರು.
ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಆರ್.ಆರ್.ಕುಲಕರ್ಣಿ ಮಾತನಾಡಿ, ತಾಲೂಕಿನ ವಿದ್ಯಾರ್ಥಿಗಳಿಗೆ ಶಿಷ್ಯವೇತನವನ್ನು ಅವರ ಖಾತೆಗೆ ನೇರವಾಗಿ ನೀಡಲಾಗುತ್ತಿದೆ ಎಂದರು. ಅಂತರಜಾತಿ ವಿವಾಹವಾದ 10 ಜೋಡಿಗಳಿಗೆ 28.5ಲಕ್ಷ ರೂ.ಗಳನ್ನು ಇಲಾಖೆಯಿಂದ ನೀಡಲಾಗಿದೆ ಎಂದರು. ತಾಲೂಕಿನಲ್ಲಿ 20 ವಸತಿ ನಿಲಯಗಳಿದ್ದು, ಅದರಲ್ಲಿ 4 ವಸತಿ ನಿಲಯಗಳು ಬಾಡಿಗೆ ಕಟ್ಟಡಗಳಲ್ಲಿ ನಿರ್ವಹಿಸಲಾಗುತ್ತಿದೆ ಎಂದರು.
ಹೆಸ್ಕಾಂನ ಎಇಇ ಎಸ್.ಎಸ್.ಮಠಪತಿ ಮಾತನಾಡಿ, ಬೆಳಕು ಯೋಜನೆಯಡಿ ಗ್ರಾಮೀಣ ಭಾಗದಲ್ಲಿನ ಫಲಾನುಭವಿಗಳ ಪಟ್ಟಿ ಮಾಡಿಕೊಟ್ಟಲ್ಲಿ ಅವರಿಗೆ ಕೂಡಲೆ ಯೋಜನೆಯ ಲಾಭ ದೊರಕಿಸುವ ನಿಟ್ಟಿನಲ್ಲಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದರು.
ತಹಸೀಲ್ದಾರ ಪ್ರಶಾಂತ ಪಾಟೀಲ, ತಾ.ಪಂ ಇಓ ಯಶವಂತಕುಮಾರ, ತಾ.ಪಂ ಆಡಳಿತಾಧಿಕಾರಿ ಶಶಿಧರ, ಯರಗಟ್ಟಿ ತಹಸೀಲ್ದಾರ ಎಮ್.ಎನ್.ಮಠದ, ಕೆಡಿಪಿ ಸದಸ್ಯರಾದ ಬಸಮ್ಮಾ ಅಮಾತೆನ್ನವರ, ಪಟ್ಟಣಶೆಟ್ಟಿ ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.