ಪ್ರಾಣ ರಕ್ಷಿಸಿಕೊಳ್ಳಲು ಉರಿಯುತ್ತಿದ್ದ ಹಡಗಿನಿಂದ ಜಂಪ್ ಮಾಡಿದ ಪ್ರಯಾಣಿಕರು
ಮನಿಲಾ, ಪಿಲಿಫೈನ್ಸ್: ಮೇ 25: ರಾಜಧಾನಿ ಮನಿಲಾದಿಂದ ಪೂರ್ವಕ್ಕೆ 60 ಕಿಲೋಮೀಟರ್ ದೂರದಲ್ಲಿರುವ ಬಂದರನ್ನು ತಲುಪುವ ಮುನ್ನವೇ ಈ ವಾರದ ಆರಂಭದಲ್ಲಿ 157 ಜನರನ್ನು ಹೊತ್ತ ಪಿಲಿಫೈನ್ಸ್ ದೋಣಿ ಬೆಂಕಿಗೆ ಆಹುತಿಯಾಯಿತು. ಲೈಫ್ ಜಾಕೆಟ್ ಧರಿಸಿ ಸಮುದ್ರದಲ್ಲಿ ತೇಲುತ್ತಿದ್ದವರು ರಕ್ಷಣೆಗಾಗಿ ಕಾಯುತಿದ್ದ ಮನಕಲಕುವ ಹಲವು ಚಿತ್ರಗಳನ್ನು ಕೋಸ್ಟ್ ಗಾರ್ಡ್ ಹಂಚಿಕೊಂಡಿದೆ.
ಎರಡು ಅಂತಸ್ತಿನ ಪ್ರಯಾಣಿಕ ನೌಕೆಯಿಂದ ದಟ್ಟವಾದ ಹೊಗೆ ಹರಡುತ್ತಿರುವುದು ಚಿತ್ರದಲ್ಲಿ ಗೋಚರವಾಗುತ್ತದೆ.
ಬೆಂಕಿಯ ಕಾರಣ ಇನ್ನೂ ತಿಳಿದುಬಂದಿಲ್ಲವಾದರೂ, ದುರಂತದಲ್ಲಿ ಐವರು ಮಹಿಳೆಯರು ಮತ್ತು ಇಬ್ಬರು ಪುರುಷರು ಸಾವನ್ನಪ್ಪಿದ್ದಾರೆ. 120 ಪ್ರಯಾಣಿಕರನ್ನು ರಕ್ಷಿಸಲಾಗಿದೆ. ಅವರಲ್ಲಿ 23 ಮಂದಿ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಕರಾವಳಿ ಸಿಬ್ಬಂದಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ದ್ವೀಪಸಮೂಹ ರಾಷ್ಟ್ರದ ಈಶಾನ್ಯದಲ್ಲಿರುವ ಪೊಲಿಲೊ ದ್ವೀಪದಿಂದ ಹಡಗು ಹೊರಟಿತ್ತು ಮತ್ತು ರಿಯಲ್ ಪಟ್ಟಣದಲ್ಲಿ ಲಂಗರು ಹಾಕಬೇಕಿತ್ತು. ಸ್ಥಳೀಯ ಕಾಲಮಾನ ಮುಂಜಾನೆ 5 ಗಂಟೆ ಸುಮಾರಿಗೆ ಹಡಗಿನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಸ್ಥಳೀಯ ಕಾಲಮಾನ ಬೆಳಗ್ಗೆ 6:30ಕ್ಕೆ ಅಧಿಕಾರಿಗಳು ಆಪತ್ತಿನ ಬಗ್ಗೆ ಕರೆ ಸ್ವೀಕರಿಸಿದ್ದರು. ಬೆಂಕಿ ಪ್ರಾರಂಭವಾದ ನಂತರ ಬೆಂಕಿ ನಂದಿಸಲು ಸುಮಾರು ಐದು ಗಂಟೆಗಳ ಕಾಲ ತೆಗೆದುಕೊಂಡಿತು. ಘಟನೆಯ ಕುರಿತು ತನಿಖೆ ನಡೆಸಲಾಗುತ್ತಿದೆ ಎಂದು ಪಿಲಿಫೈನ್ಸ್ ಕೋಸ್ಟ್ ಗಾರ್ಡ್ ಹೇಳಿಕೆಯಲ್ಲಿ ದೃಢಪಡಿಸಿದೆ.
ಹಡಗಿನಲ್ಲಿದ್ದ ಜನರ ಸಂಖ್ಯೆಯ ಬಗ್ಗೆ ಮೂಲತಃ ಕೆಲವು ವ್ಯತಿರಿಕ್ತ ವರದಿಗಳು ಇದ್ದವು. ಆದಾಗ್ಯೂ, ಕೋಸ್ಟ್ ಗಾರ್ಡ್ ಟ್ವಿಟ್ಟರ್ ಹೇಳಿಕೆಯಲ್ಲಿ ಸ್ಪಷ್ಟೀಕರಣವನ್ನು ನೀಡಿದ್ದು, ಮೇ 23, 2022 ರಂದು ರಿಯಲ್, ಕ್ವಿಜಾನ್‌ನ ಸುತ್ತಮುತ್ತಲಿನ ನೀರಿನಲ್ಲಿ MV MERCRAFT 2 ಅನ್ನು ಒಳಗೊಂಡ ಬೆಂಕಿಯ ಘಟನೆಯ ಸಮಯದಲ್ಲಿ 157 ವ್ಯಕ್ತಿಗಳು ಹಡಗಿನಲ್ಲಿದ್ದರು ಎಂದು ಬಹಿರಂಗಪಡಿಸಿದೆ.