ಅಂತರರಾಷ್ಟ್ರೀಯ

ಭಾರತೀಯ ಪರಾಗ್ ಅಗರ್ವಾಲ್ ಗೆ ಒಲಿದ ಟ್ವಿಟ್ಟರ್ ಸಿಇಒ ಹುದ್ದೆ!

ಭಾರತೀಯ ಪರಾಗ್ ಅಗರ್ವಾಲ್ ಗೆ ಒಲಿದ ಟ್ವಿಟ್ಟರ್ ಸಿಇಒ ಹುದ್ದೆ!

ವಾಷಿಂಗಟನ್, ನ 30: ಟ್ವಿಟ್ಟರ್ ಸಹ ಸಂಸ್ಥಾಪಕ ಜಾಕ್ ಡಾರ್ಸೆ ಕಂಪನಿಯ ಸಿಇಒ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಸೋಷಿಯಲ್ ಮೀಡಿಯಾದಲ್ಲಿ ಅತ್ಯಂತ ಜನಪ್ರಿಯವಾಗಿರುವ ಟ್ವಿಟ್ಟರ್ ಕಂಪನಿಯ ಸಿಇಒ ಹುದ್ದೆ ಭಾರತೀಯ ಮೂಲದ ಪರಾಗ್ ಅಗರ್ವಾಲ್ ಅವರಿಗೆ ಒಲಿದುಬಂದಿದೆ. 

ಯುಎಸ್ ಮಾಧ್ಯಮ ನೆಟ್‌ವರ್ಕ್ ಸಿಎನ್‌ಬಿಸಿಯ ವರದಿಯ ಪ್ರಕಾರ, ಟ್ವಿಟ್ಟರ್ ಸಹ-ಸಂಸ್ಥಾಪಕರಾಗಿದ್ದ ಜಾಕ್ ಡಾರ್ಸೆ ರಾಜೀನಾಮೆ ನೀಡಲು ಸಿದ್ಧರಾಗಿದ್ದಾರೆ. ಈ ಸುದ್ದಿ ಹೊರ ಬಿದ್ದ ನಂತರ ಪರಾಗ್ ಅಗರ್ವಾಲ್ ಕಂಪನಿಯ ಹೊಸ ಸಿಇಒ ಆಗಲಿದ್ದಾರೆ ಅಂತಾ ವರದಿಯಾಗಿದೆ. 45 ವರ್ಷದ ಪರಾಗ್ ಅವರೇ ಇದನ್ನು ಗೌರವ ಎಂದು ಹೇಳಿಕೊಂಡಿದ್ದಾರೆ. ಕಳೆದ 10 ವರ್ಷಗಳ ಹಿಂದೆ ಕಂಪನಿ ಸೇರಿಕೊಂಡಿದ್ದ ಪರಾಗ್ ಅಗರ್ವಾಲ್, ಮುಖ್ಯ ತಂತ್ರಜ್ಞಾನ ಅಧಿಕಾರಿ ಹುದ್ದೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದರು.  

ಐಐಟಿ ಬಾಂಬೆಯಲ್ಲಿ ಓದಿರುವ ಪರಾಗ್ ಅಗರ್ವಾಲ್ ಅವರು ಸ್ಟ್ಯಾನ್‌ಫೋರ್ಡ್ ವಿಶ್ವವಿದ್ಯಾಲಯದಿಂದ ಡಾಕ್ಟರೇಟ್ ಪದವಿಯನ್ನೂ ಪಡೆದಿದ್ದಾರೆ. 2018 ರಲ್ಲಿ, ಆಡಮ್ ಮೆಸ್ಸಿಯರ್ ಬದಲಿಗೆ ಟ್ವಿಟರ್ ಅವರನ್ನು ಮುಖ್ಯ ತಂತ್ರಜ್ಞಾನ ಅಧಿಕಾರಿಯಾಗಿ ನೇಮಿಸಿತು. ಟ್ವಿಟ್ಟರ್ ಗೆ ಮೊದಲು, ಪರಾಗ್ ಮೈಕ್ರೋಸಾಫ್ಟ್ ರಿಸರ್ಚ್ ಮತ್ತು ಯಾಹೂ ಜೊತೆ ಕೆಲಸ ಮಾಡಿದ್ದಾರೆ. 

ಡಾರ್ಸೆ ಸೇರಿದಂತೆ ಮೂವರು ಮಾರ್ಚ್ 21, 2006 ರಂದು ಸ್ಯಾನ್ ಫ್ರಾನ್ಸಿಸ್ಕೋದಲ್ಲಿ ಟ್ವಿಟರ್ ಕಂಪನಿಯನ್ನು ಸ್ಥಾಪಿಸಿದ್ದರು. ಇದರ ಬಳಿಕ ಡಾರ್ಸೆ ಅವರು ಅತಿದೊಡ್ಡ ತಂತ್ರಜ್ಞಾನ ಉದ್ಯಮಿಗಳಲ್ಲಿ ಒಬ್ಬರಾದರು. ಡಾರ್ಸೆ ಕೆಳಗಿಳಿಯುತ್ತಿದ್ದಾರೆ ಎಂಬ ಸುದ್ದಿ ಹೊರಬಂದ ನಂತರ ಕಂಪನಿಯ ಷೇರುಗಳ ಬೆಲೆಗಳು 10% ವರೆಗೆ ಏರಿಕೆಯಾಗಿದೆ.


ಸುದ್ದಿ ಓದಿ