ಅಂತರರಾಷ್ಟ್ರೀಯ

ಪಾಕ್ ಸೇನೆ ಏರ್‌ಸ್ಟ್ರೈಕ್: ಪಾಕಿಸ್ತಾನಕ್ಕೆ ಎಚ್ಚರಿಕೆ ಕೊಟ್ಟ ಅಫ್ಘಾನಿಸ್ತಾನ!

ಪಾಕ್ ಸೇನೆ ಏರ್‌ಸ್ಟ್ರೈಕ್: ಪಾಕಿಸ್ತಾನಕ್ಕೆ ಎಚ್ಚರಿಕೆ ಕೊಟ್ಟ ಅಫ್ಘಾನಿಸ್ತಾನ!

ಕಾಬೂಲ್: ಏಪ್ರಿಲ್ 17: ಅಫ್ಘಾನಿಸ್ತಾನದ ಖೋಸ್ಟ್ ಮತ್ತು ಕುನಾರ್ ಪ್ರಾಂತ್ಯಗಳ ಮೇಲೆ ಪಾಕಿಸ್ತಾನ ವೈಮಾನಿಕ ದಾಳಿ ನಡೆಸಿದೆ. ಸ್ಥಳೀಯ ಪೊಲೀಸರು ನೀಡಿರುವ ಮಾಹಿತಿ ಪ್ರಕಾರ, ಪೆಸಾ ಮಿಲಾ ಮತ್ತು ಮೀರ್ ಸಫರ್ ಬಾಂಬ್ ಸ್ಫೋಟದಲ್ಲಿ 5 ಮಕ್ಕಳು ಮತ್ತು ಒಬ್ಬ ಮಹಿಳೆ ಸಾವನ್ನಪ್ಪಿದ್ದಾರೆ. ಆದರೆ, ಖೋಸ್ಟ್‌ನ ಸ್ಪೆರಾ ಜಿಲ್ಲೆಯಲ್ಲಿ ನಡೆದ ದಾಳಿಯಲ್ಲಿ 40 ಕ್ಕೂ ಹೆಚ್ಚು ಜನರು ಮೃತರಾಗಿದ್ದಾರೆ ಎಂದು ಸ್ಥಳೀಯರು ಹೇಳಿದ್ದಾರೆ. ವೈಮಾನಿಕ ದಾಳಿ ಬಳಿಕ ಅಫ್ಘಾನಿಸ್ತಾನದ ಜನರು ರಸ್ತೆಗಿಳಿದು ಪಾಕಿಸ್ತಾನದ ವಿರುದ್ಧ ಪ್ರತಿಭಟಿಸಿದರು.

ದಾಳಿಯ ಬಗ್ಗೆ ಪಾಕಿಸ್ತಾನ ಸರ್ಕಾರದಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಆದರೆ ಅಲ್ಲಿನ ಮಾಧ್ಯಮಗಳು ತೆಹ್ರೀಕ್-ಎ-ತಾಲಿಬಾನ್ ಪಾಕಿಸ್ತಾನ್ (ಟಿಟಿಪಿ) ಮೇಲೆ ವೈಮಾನಿಕ ದಾಳಿ ನಡೆಸಲಾಗಿದೆ ಎಂದು ಹೇಳಿವೆ.

ಪಾಕಿಸ್ತಾನದ ಏರ್ ಸ್ಟ್ರೈಕ್ ಬಳಿಕ ಅಫ್ಘಾನಿಸ್ತಾನದ ವಿದೇಶಾಂಗ ಸಚಿವಾಲಯ ದಾಳಿಯನ್ನು ಬಲವಾಗಿ ಖಂಡಿಸಿದೆ. ವೈಮಾನಿಕ ದಾಳಿಯ ನಂತರ ತಾಲಿಬಾನ್ ಸರ್ಕಾರವು ಪಾಕಿಸ್ತಾನದ ರಾಯಭಾರಿ ಮನ್ಸೂರ್ ಅಹ್ಮದ್ ಖಾನ್ ಅವರನ್ನು ಕರೆಸಿಕೊಂಡಿತ್ತು. ಈ ಸಂದರ್ಭದಲ್ಲಿ, ಅಫ್ಘಾನಿಸ್ತಾನದ ವಿದೇಶಾಂಗ ಸಚಿವ ಅಮೀರ್ ಖಾನ್ ಮುತ್ತಕಿ ಮತ್ತು ಉಪ ರಕ್ಷಣಾ ಸಚಿವ ಅಲ್ಹಾಜ್ ಮುಲ್ಲಾ ಶಿರಿನ್ ಅಖುಂಡ್ ಉಪಸ್ಥಿತರಿದ್ದರು.

ಈ ಮಧ್ಯೆ ತಾಲಿಬಾನ್ ವಕ್ತಾರ ಜಬೀವುಲ್ಲಾ ಮುಜಾಹಿದ್ ಟ್ವೀಟ್ ಮಾಡುವ ಮೂಲಕ ಪಾಕಿಸ್ತಾನ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ. “ಇಂತಹ ಸಂದರ್ಭಗಳಲ್ಲಿ ಅಫ್ಘಾನಿಸ್ತಾನದ ತಾಳ್ಮೆಯನ್ನು ಪರೀಕ್ಷಿಸಬಾರದು ಎಂದು ಪಾಕಿಸ್ತಾನವನ್ನು ಅಫ್ಘಾನಿಸ್ತಾನ ಒತ್ತಾಯಿಸುತ್ತದೆ. ಮತ್ತೆ ಇಂತಹ ತಪ್ಪು ಮಾಡಿದರೆ ಕೆಟ್ಟ ಪರಿಣಾಮ ಉಂಟಾಗುತ್ತದೆ. ಉಭಯ ದೇಶಗಳ ನಡುವಿನ ಸಮಸ್ಯೆಗಳನ್ನು ರಾಜಕೀಯ ಮಾರ್ಗಗಳ ಮೂಲಕ ಪರಿಹರಿಸಬೇಕು” ಎಂದು ಟ್ವೀಟ್ ಮಾಡಿದ್ದಾರೆ.

ಪಾಕಿಸ್ತಾನಿ ಮಾಧ್ಯಮಗಳ ಪ್ರಕಾರ, ತೆಹ್ರೀಕ್-ಎ-ತಾಲಿಬಾನ್ ಪಾಕಿಸ್ತಾನ್ (ಟಿಟಿಪಿ) ಮತ್ತು ಪಶ್ತೂನ್ ಇಸ್ಲಾಮಿಕ್ ಗುಂಪುಗಳನ್ನು ಪಾಕ್ ಸೇನೆ ಗುರಿಯಾಗಿರಿಸಿಕೊಂಡು ದಾಳಿ ಮಾಡಿದೆ ಎಂದು ವರದಿ ಮಾಡಿವೆ.

ಸುದ್ದಿ ಓದಿ