ಚೀನಾದಿಂದ 3 ಬಿಲಿಯನ್ ಡಾಲರ್ ಸಾಲ ಪಡೆಯಲು ಪಾಕಿಸ್ತಾನ ಯತ್ನ!
ಇಸ್ಲಾಮಾಬಾದ್: ಜನವರಿ 31 ಆರ್ಥಿಕ ದಿವಾಳಿಯಾಗುವ ಹಂತದಲ್ಲಿರುವ ಪಾಕಿಸ್ತಾನ ನಗದು ಕೊರತೆ ಎದುರಿಸುತ್ತಿದೆ. ಹೀಗಾಗಿ, ಚೀನಾದಿಂದ 3 ಬಿಲಿಯನ್ ಡಾಲರ್ ಸಾಲ ಸಂಗ್ರಹಿಸುವ ಯತ್ನಕ್ಕೆ ಕೈ ಹಾಕಿದೆ. ಮುಂದಿನ ವಾರ ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಅವರ ಚೀನಾ ಭೇಟಿ ಮಾಡಲಿದ್ದು ಈ ವೇಳ ಈ ಸಾಲದ ಬಗ್ಗೆ ಪ್ರಸ್ತಾಪ ಮಾಡಲಿದ್ದಾರೆ.
ಭಾನುವಾರ ಪಾಕಿಸ್ತಾನದ ಮಾಧ್ಯಮಗಳಲ್ಲಿ ಪ್ರಕಟವಾದ ಸುದ್ದಿಯ ಪ್ರಕಾರ, ಇಮ್ರಾನ್ ಫೆಬ್ರವರಿ 3 ರಂದು ಚೀನಾದ ರಾಜಧಾನಿ ಬೀಜಿಂಗ್‌ಗೆ ಭೇಟಿ ನೀಡಲಿದ್ದಾರೆ. ಈ ವೇಳೆ ಅವರು ಚೀನಾದ ಉನ್ನತ ನಾಯಕರನ್ನು ಭೇಟಿ ಮಾಡುವ ಕಾರ್ಯಕ್ರಮವೂ ನಿಗದಿಯಾಗಿದೆ. ಇಮ್ರಾನ್ ಅವರ ಈ ಭೇಟಿಯ ಸಮಯದಲ್ಲಿ ಚೀನಾ ಮೂರು ಬಿಲಿಯನ್ ಡಾಲರ್‌ಗಳ ಮತ್ತೊಂದು ಸಾಲದ ಬೇಡಿಕೆಯನ್ನು ಇಡುವ ಸಾಧ್ಯತೆ ಇದೆ ಎಂದು ಪಾಕ್ ಸರ್ಕಾರಿ ಅಧಿಕಾರಿಗಳನ್ನು ಉಲ್ಲೇಖಿಸಿ ‘ದಿ ಎಕ್ಸ್‌ಪ್ರೆಸ್ ಟ್ರಿಬ್ಯೂನ್’ ತನ್ನ ಸುದ್ದಿಯಲ್ಲಿ ಪ್ರಕಟಿಸಿದೆ. ಚೀನಾ ಈಗಾಗಲೇ ಪಾಕಿಸ್ತಾನಕ್ಕೆ 11 ಬಿಲಿಯನ್ ಡಾಲರ್ ಸಾಲ ನೀಡಿದೆ.
ಕಳೆದ ಹಣಕಾಸು ವರ್ಷದಲ್ಲಿ ಪಾಕಿಸ್ತಾನವು 26 ಬಿಲಿಯನ್ ಪಾಕಿಸ್ತಾನಿ ರೂಪಾಯಿಗಳನ್ನು ಚೀನಾಕ್ಕೆ ಬಡ್ಡಿಯಾಗಿ ಪಾವತಿ ಮಾಡಿದೆ. ಇದಲ್ಲದೆ, ಆರು ಕ್ಷೇತ್ರಗಳಲ್ಲಿ ಚೀನಾ ಹೂಡಿಕೆಯನ್ನು ಆಕರ್ಷಿಸಲು ಪಾಕಿಸ್ತಾನ ಪ್ರಯತ್ನಿಸುತ್ತಿದೆ. ಜವಳಿ, ಪಾದರಕ್ಷೆ, ಫಾರ್ಮಾ, ಪೀಠೋಪಕರಣಗಳು, ಕೃಷಿ, ಆಟೋಮೊಬೈಲ್ ಮತ್ತು ಮಾಹಿತಿ ತಂತ್ರಜ್ಞಾನ ಕ್ಷೇತ್ರಗಳಲ್ಲಿ ಚೀನಾ ಹೂಡಿಕೆ ಮಾಡುವಂತೆ ಪ್ರೇರೇಪಿಸಲು ಪ್ರಯತ್ನಗಳು ಸಾಗುತ್ತಿವೆ ಎಂದು ಪಾಕಿಸ್ತಾನ ಹೂಡಿಕೆ ಮಂಡಳಿಯ ಮುಖ್ಯಸ್ಥ ಅಜ್ಫರ್ ಅಹ್ಸಾನ್ ಹೇಳಿದ್ದಾರೆ.
ಇದಕ್ಕಾಗಿ, ಪಶ್ಚಿಮ ಏಷ್ಯಾ, ಆಫ್ರಿಕಾ ಮತ್ತು ವಿಶ್ವದ ಇತರ ಭಾಗಗಳಿಗೆ ವ್ಯಾಪಾರ ಮಾರ್ಗಗಳನ್ನು ಒದಗಿಸಲು ಚೀನಾದ ಸುಮಾರು 75 ಕಂಪನಿಗಳಿಗೆ ಪಾಕಿಸ್ತಾನ ಭರವಸೆ ನೀಡಲಿದೆ. ಇದರಿಂದ ಚೀನಾಕ್ಕೆ ಸಾರಿಗೆ ಮತ್ತು ಕೂಲಿ ವೆಚ್ಚ ಕಡಿಮೆಯಾಗಲಿದೆ. ಚೀನಾ-ಪಾಕಿಸ್ತಾನ ಆರ್ಥಿಕ ಕಾರಿಡಾರ್ ಪ್ರಾಧಿಕಾರ ರಚನೆಯಾದ ಮೇಲೆ ವಿದೇಶಿ ಹೂಡಿಕೆಯನ್ನು ಉತ್ತೇಜಿಸುವ ಸಂಬಂಧ ಪಾಕ್ ಸರ್ಕಾರವು ಈ ಪ್ರದೇಶಗಳನ್ನು ಗುರುತಿಸಿದೆ ಎಂದು ಫೆಡರಲ್ ಯೋಜನೆ ಮತ್ತು ಅಭಿವೃದ್ಧಿ ಸಚಿವ ಅಸಾದ್ ಉಮರ್ ಹೇಳಿದ್ದಾರೆ. ಒಟ್ಟಾರೆ, ಸಾಲದ ಮೇಲೆ ಸಾಲ ಪಡೆಯಲು ಯತ್ನಿಸುತ್ತಿರುವ ಪಾಕಿಸ್ತಾನ ಆರ್ಥಿಕವಾಗಿ ದಿವಾಳಿಯಾಗುವ ಲಕ್ಷಣಗಳು ಗೋಚರವಾಗುತ್ತಿವೆ.