ಇಮ್ರಾನ್ ಖಾನ್‌ಗೆ ಛೀಮಾರಿ: ತೀರ್ಪು ಪ್ರಕಟಿಸಿದ ಪಾಕ್ ಸುಪ್ರೀಂಕೋರ್ಟ್
ಇಸ್ಲಾಮಾಬಾದ್: ಏಪ್ರಿಲ್ 07 (ಯು.ಎನ್.ಐ.) ಪಾಕಿಸ್ತಾನದ ರಾಷ್ಟ್ರೀಯ ಅಸೆಂಬ್ಲಿಯನ್ನು ವಿಸರ್ಜಿಸುವ ನಿರ್ಧಾರದ ಬಗ್ಗೆ ಸುಪ್ರೀಂ ಕೋರ್ಟ್ ತನ್ನ ತೀರ್ಪನ್ನು ಇಂದು ನೀಡಿದೆ. ಏಪ್ರಿಲ್ 3 ರಂದು ಡೆಪ್ಯೂಟಿ ಸ್ಪೀಕರ್ ಅವಿಶ್ವಾಸ ನಿರ್ಣಯವನ್ನು ರದ್ದುಗೊಳಿಸುವ ರಾಷ್ಟ್ರೀಯ ಅಸೆಂಬ್ಲಿಯ ನಿರ್ಧಾರವನ್ನು ಅಸಂವಿಧಾನಿಕ ಎಂದು ನ್ಯಾಯಾಲಯ ಹೇಳಿದೆ. ಅಲ್ಲದೆ, ಸಂಸತ್ತನ್ನು ವಿಸರ್ಜಿಸುವಂತೆ ಪ್ರಧಾನಿ ಇಮ್ರಾನ್ ಖಾನ್ ರಾಷ್ಟ್ರಪತಿಗಳಿಗೆ ಮಾಡಿದ ಮನವಿಯೂ ಸಂಪೂರ್ಣವಾಗಿ ಕಾನೂನುಬಾಹಿರವಾಗಿದೆ ಎಂದು ಆದೇಶ ನೀಡಿದೆ.
ಇದೀಗ ನ್ಯಾಯಾಲಯದ ಈ ತೀರ್ಪಿನ ಬಳಿಕ ಸಂಸತ್ ವಿಸರ್ಜನೆಯ ರಾಷ್ಟ್ರಪತಿಗಳ ನಿರ್ಧಾರವೂ ರದ್ದಾಗಿದೆ. ಸಂಸತ್ತನ್ನು ಪುನಃಸ್ಥಾಪಿಸಲಾಗಿದೆ ಎಂದು ಸುಪ್ರೀಂ ಕೋರ್ಟ್ ತಿಳಿಸಿದೆ. ಇದರೊಂದಿಗೆ ಇಮ್ರಾನ್ ಖಾನ್ ರಾಷ್ಟ್ರೀಯ ಅಸೆಂಬ್ಲಿಯಲ್ಲಿ ಅವಿಶ್ವಾಸ ನಿರ್ಣಯವನ್ನು ಎದುರಿಸಬೇಕಾಗುತ್ತದೆ. ಇದಕ್ಕೆ ನ್ಯಾಯಾಲಯ ದಿನಾಂಕವನ್ನೂ ಸಹ ನಿಗದಿಪಡಿಸಿದೆ. ಅವಿಶ್ವಾಸ ನಿರ್ಣಯದ ಮೇಲಿನ ಮತದಾನವು ಏಪ್ರಿಲ್ 9 ರಂದು ಬೆಳಿಗ್ಗೆ 10 ಗಂಟೆಗೆ ಪಾಕಿಸ್ತಾನದ ರಾಷ್ಟ್ರೀಯ ಅಸೆಂಬ್ಲಿಯಲ್ಲಿ ನಡೆಯಲಿದೆ.
ವಿಶೇಷವೆಂದರೆ, ಇಮ್ರಾನ್ ಸರ್ಕಾರದ ವಿರುದ್ಧದ ಅವಿಶ್ವಾಸ ನಿರ್ಣಯವನ್ನು ವಜಾಗೊಳಿಸಿದ ಉಪ ಸ್ಪೀಕರ್ ಆದೇಶದ ವಿರುದ್ಧ ಸಲ್ಲಿಸಲಾದ ಅರ್ಜಿಯ ಮೇಲೆ ಸುಪ್ರೀಂ ಕೋರ್ಟ್‌ನ ಈ ವಿಚಾರಣೆ ನಡೆದಿದೆ. ಈ ನಿರ್ಧಾರಕ್ಕೂ ಮುನ್ನ ಪಾಕ್ ಪ್ರಧಾನಿ ಇಮ್ರಾನ್ ಖಾನ್ ಅವರು ತಮ್ಮ ಕಾನೂನು ತಂಡದೊಂದಿಗೆ ಮಹತ್ವದ ಸಭೆ ನಡೆಸಿದ್ದರು. ಈ ವೇಳೆ ನ್ಯಾಯಾಲಯ ನೀಡುವ ಯಾವುದೇ ತೀರ್ಪನ್ನು ಪಾಕಿಸ್ತಾನ್ ತೆಹ್ರೀಕ್-ಎ-ಇನ್ಸಾಫ್ ಸ್ವಾಗತಿಸುವುದಾಗಿ ಇಮ್ರಾನ್ ಖಾನ್ ಹೇಳಿದ್ದರು.
ವಿಚಾರಣೆ ವೇಳೆ ಮುಖ್ಯ ನ್ಯಾಯಮೂರ್ತಿ ಇಮ್ರಾನ್ ಖಾನ್‌ಗೆ ಛೀಮಾರಿ ಹಾಕಿದರು. ಪ್ರಸ್ತುತ ಬಿಕ್ಕಟ್ಟಿನಲ್ಲಿ ನೀವು 90 ದಿನಗಳ ಕಾಲ ದೇಶವನ್ನು ನಿರ್ಗತಿಕರಾಗಿ ಬಿಟ್ಟಿದ್ದೀರಿ ಎಂದು ಮುಖ್ಯ ನ್ಯಾಯಮೂರ್ತಿ ಆಕ್ರೋಶ ವ್ಯಕ್ತಪಡಿಸಿದರು.
ಸಂಸತ್ ವಿಸರ್ಜಿಸುವ ಹಕ್ಕು ಇಮ್ರಾನ್‌ಗೆ ಇದೆ: ಅಟಾರ್ನಿ ಜನರಲ್
ಪಿಟಿಐ ನೇತೃತ್ವದ ಸರ್ಕಾರವನ್ನು ಪದಚ್ಯುತಗೊಳಿಸಲು ವಿದೇಶಿ ಪಿತೂರಿಯ ಪುರಾವೆಗಳನ್ನು ನೀಡುವಂತೆ ಮುಖ್ಯ ನ್ಯಾಯಮೂರ್ತಿ ಇಮ್ರಾನ್ ಖಾನ್ ವಕೀಲರನ್ನು ಕೇಳಿದ್ದರು. ಸರ್ಕಾರದ ಪರವಾಗಿ ಹಾಜರಾದ ಅಟಾರ್ನಿ ಜನರಲ್ ಖಾಲಿದ್ ಜಾವೇದ್ ಖಾನ್ ಅವರು, ಕೌನ್ಸಿಲ್ ಸಭೆಯ ವಿವರಗಳನ್ನು ತೆರೆದ ನ್ಯಾಯಾಲಯದಲ್ಲಿ ಇಡಲು ಸಾಧ್ಯವಿಲ್ಲ ಎಂದು ನ್ಯಾಯಾಲಯಕ್ಕೆ ತಿಳಿಸಿದರು. ನ್ಯಾಯಾಲಯವು ಯಾರ ನಿಷ್ಠೆಯನ್ನು ಪ್ರಶ್ನಿಸದೆ ಯಾವುದೇ ಆದೇಶವನ್ನು ನೀಡಬಹುದಾಗಿದೆ. ಸಂಸತ್ ವಿಸರ್ಜಿಸುವ ಅಧಿಕಾರ ಪ್ರಧಾನಿಗೆ ಇದೆ ಎಂದೂ ಅವರು ವಾದಿಸಿದ್ದರು.