ಪಾಕ್ ರಾಜಕೀಯ ಬಿಕ್ಕಟ್ಟು: ರಾಷ್ಟ್ರೀಯ ಭದ್ರತಾ ಸಲಹೆಗಾರ ರಾಜೀನಾಮೆ!
ಇಸ್ಲಾಮಾಬಾದ್: ಏಪ್ರಿಲ್ 04 : ಪಾಕಿಸ್ತಾನದಲ್ಲಿ ರಾಜಕೀಯ ಹೈಡ್ರಾಮಾ ಮುಂದುವರಿದಿದೆ. ಈ ಮಧ್ಯೆ ಅಧಿಕಾರ ಕಳೆದುಕೊಂಡ ಇಮ್ರಾನ್ ಖಾನ್ ಗೆ ಇಂದು ಮತ್ತೊಂದು ದೊಡ್ಡ ಹಿನ್ನಡೆಯಾಗಿದೆ. ದೇಶದ ರಾಷ್ಟ್ರೀಯ ಭದ್ರತಾ ಸಲಹೆಗಾರ ಡಾ ಮೊಯೀದ್ ಯೂಸುಫ್ ರಾಜೀನಾಮೆ ನೀಡಿದ್ದಾರೆ. ಇದಕ್ಕೂ ಮುನ್ನ ಖಾನ್ ಅವರ ಮುಖ್ಯ ಕಾರ್ಯದರ್ಶಿ ಅಜಂ ಖಾನ್ ಮತ್ತು ಸಲಹೆಗಾರ ಶಹಜಾದ್ ಅಕ್ಬರ್ ಕೂಡ ರಾಜೀನಾಮೆ ನೀಡಿದ್ದರು.
ವಿಶೇಷವೆಂದರೆ ಈ ಮೂವರೂ ದ್ವಿಪೌರತ್ವ ಹೊಂದಿದ್ದಾರೆ. ಅಜಮ್ ಮತ್ತು ಮೊಯೀದ್ ಯೂಸುಫ್ ಅಮೆರಿಕದ ಪೌರತ್ವವನ್ನು ಹೊಂದಿದ್ದರೆ, ಶಹಜಾದ್ ಅಕ್ಬರ್ ಯುಕೆ ಪೌರತ್ವವನ್ನು ಹೊಂದಿದ್ದಾರೆ. ಮೊಯೀದ್ ಯೂಸುಫ್ ಪಾಕಿಸ್ತಾನದ ಮೊದಲ ರಾಷ್ಟ್ರೀಯ ಭದ್ರತಾ ನೀತಿಯನ್ನು ಜನವರಿಯಲ್ಲಿ ಪರಿಚಯಿಸಿದ್ದರು. ವಿದೇಶಾಂಗ ಸಚಿವ ಶಾ ಮೆಹಮೂದ್ ಖುರೇಷಿ ಮತ್ತು ಯೂಸುಫ್ ಯಾವಾಗ್ಲೂ ನಿಕಟ ಸಂಬಂಧವನ್ನು ಹೊಂದಿದ್ದರು.
ಈ ವಿಚಾರದಲ್ಲಿ ಮತ್ತೊಂದು ಕುತೂಹಲಕಾರಿ ಅಂಶವೆಂದರೆ, ಎರಡು ದಿನಗಳ ಹಿಂದೆಯಷ್ಟೇ ವಿರೋಧ ಪಕ್ಷದ ನಾಯಕಿ ಮರ್ಯಮ್ ನವಾಜ್ ಅವರು ಇಮ್ರಾನ್ ಅವರ ವಿದೇಶಿ ಮಿತ್ರರು ಶೀಘ್ರದಲ್ಲೇ ದೇಶವನ್ನು ತೊರೆಯುತ್ತಾರೆ, ಅವರನ್ನು ತಡೆಯಬೇಕು ಎಂದು ಹೇಳಿದ್ದರು. ಜನವರಿವರೆಗೆ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿಯಾಗಿದ್ದ ನ್ಯಾಯಮೂರ್ತಿ ಗುಲ್ಜಾರ್ ಅಹಮದ್ ಕೂಡ ದೇಶ ತೊರೆದಿದ್ದಾರೆ.