ಪಾಕ್ ರಾಜಕೀಯ ಬಿಕ್ಕಟ್ಟು: “ಇಮ್ರಾನ್ ಒಬ್ಬ ದೇಶದ್ರೋಹಿ”-ನವಾಜ್ ಷರೀಫ್
ಇಸ್ಲಾಮಾಬಾದ್: ಏಪ್ರಿಲ್ 03 : ಪಾಕಿಸ್ತಾನದ ಮಾಜಿ ಪ್ರಧಾನಿ ನವಾಜ್ ಷರೀಫ್ ಅವರು ಇಮ್ರಾನ್ ಖಾನ್ ಮತ್ತು ದೇಶದ ವಿರುದ್ಧದ “ಪಿತೂರಿ” ಯಲ್ಲಿ ಭಾಗಿಯಾಗಿರುವ ಎಲ್ಲರೂ ದೇಶ ವಿರೋಧಿಗಳು. ಅವರನ್ನು ಸಂವಿಧಾನದ 6ನೇ ವಿಧಿಯ ಅಡಿಯಲ್ಲಿ ವಿಚಾರಣೆಗೆ ಒಳಪಡಿಸಬೇಕು ಎಂದು ಹೇಳಿದ್ದಾರೆ. ಎಕ್ಸ್‌ಪ್ರೆಸ್ ಟ್ರಿಬ್ಯೂನ್ ವರದಿಯಲ್ಲಿ ಈ ಮಾಹಿತಿ ನೀಡಲಾಗಿದೆ. ಪ್ರಧಾನಿ ಇಮ್ರಾನ್ ಅವರ ಸಲಹೆಯ ಮೇರೆಗೆ ಅಧ್ಯಕ್ಷ ಆರಿಫ್ ಅಲ್ವಿ ರಾಷ್ಟ್ರೀಯ ಅಸೆಂಬ್ಲಿಯನ್ನು ವಿಸರ್ಜಿಸಿದ ನಂತರ ನವಾಜ್ ಷರೀಫ್ ಅವರ ಈ ಹೇಳಿಕೆ ಹೊರ ಬಂದಿದೆ.
ನವಾಜ್ ಷರೀಫ್ ತಮ್ಮ ಅಧಿಕೃತ ಟ್ವಿಟರ್ ಖಾತೆಯಿಂದ ಟ್ವೀಟ್ ಮಾಡಿದ್ದು, “ಅಧಿಕಾರದ ಗೀಳು ಹೊಂದಿರುವ ವ್ಯಕ್ತಿ ಇಂದು ಸಂವಿಧಾನವನ್ನು ತುಳಿದಿದ್ದಾನೆ” ಎಂದು ಇಮ್ರಾನ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪಾಕಿಸ್ತಾನ ಮುಸ್ಲಿಂ ಲೀಗ್-ನವಾಜ್ (ಪಿಎಂಎಲ್-ಎನ್) ನ ಹಿರಿಯ ನಾಯಕ ಆಗಿರುವ ನವಾಜ್ ಷರೀಫ್, ದೇಶಕ್ಕೆ ತಪ್ಪು ಮಾಡಿದವರು ಮತ್ತು ಸಂವಿಧಾನವನ್ನು ಉಲ್ಲಂಘಿಸುವವರ ವಿರುದ್ಧ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಎಚ್ಚರಿಸಿದ್ದಾರೆ. ಸಂವಿಧಾನವನ್ನು ಎತ್ತಿ ಹಿಡಿಯುವಲ್ಲಿ ದೇಶದ ಸರ್ವೋಚ್ಚ ನ್ಯಾಯಾಲಯ ತನ್ನ ಪಾತ್ರವನ್ನು ನಿರ್ವಹಿಸುತ್ತದೆ ಎಂಬ ನಂಬಿಕೆ ಇದೆ ಎಂದು ತಿಳಿಸಿದ್ದಾರೆ.
ಷರೀಫ್, “ಸಂವಿಧಾನದ ನಿಯಮಗಳನ್ನು ಬಹಿರಂಗವಾಗಿ ಉಲ್ಲಂಘಿಸುವವರು ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ. ಇದನ್ನು ರಕ್ಷಣೆ ಮಾಡುವಲ್ಲಿ ಸುಪ್ರೀಂ ಕೋರ್ಟ್ ತನ್ನ ಪಾತ್ರವನ್ನು ವಹಿಸುತ್ತದೆ ಎಂದು ಹೇಳಿದ್ದಾರೆ.
ಸದ್ಯ ಇಂಗ್ಲೆಂಡ್ ನಲ್ಲಿ ನೆಲಸಿರುವ ನವಾಜ್ ಷರೀಫ್, ಪಾಕಿಸ್ತಾನಕ್ಕೆ ವಾಪಸ್ ಆಗುತ್ತಾರೆ ಎಂಬ ಊಹಾಪೋಹಗಳು ಎದ್ದಿರುವ ಬೆನ್ನಲ್ಲೇ ಈ ಹೇಳಿಕೆ ಹೊರಬಿದ್ದಿದೆ.