ಅಂತರರಾಷ್ಟ್ರೀಯ

ಮಾಡು ಇಲ್ಲವೇ ಮಡಿ ಸ್ಥಿತಿಯಲ್ಲಿ ಪಾಕ್ ಪಿಎಂ; ಇಮ್ರಾನ್ ಖಾನ್ ಭಾಷಣ ಸಾಧ್ಯತೆ

ಮಾಡು ಇಲ್ಲವೇ ಮಡಿ ಸ್ಥಿತಿಯಲ್ಲಿ ಪಾಕ್ ಪಿಎಂ; ಇಮ್ರಾನ್ ಖಾನ್ ಭಾಷಣ ಸಾಧ್ಯತೆ

ಇಸ್ಲಾಮಾಬಾದ್: ಏಪ್ರಿಲ್ 08: ಬೀಸೋ ದೊಣ್ಣೆಯಿಂದ ತಪ್ಪಿಸಿಕೊಂಡೆ ಎಂದು ನಿಟ್ಟುಸಿರು ಬಿಟ್ಟಿದ್ದ ಪಾಕ್ ಪ್ರಧಾನಿಗೆ ಸುಪ್ರೀಂಕೋರ್ಟ್ ಕೊಟ್ಟಿರೋ ಗೂಗ್ಲಿಯಿಂದ ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ.

ಪ್ರಧಾನಿ ಇಮ್ರಾನ್ ಖಾನ್ ವಿರುದ್ಧದ ಅವಿಶ್ವಾಸ ಗೊತ್ತುವಳಿ ತಿರಸ್ಕೃತ ಮತ್ತು ರಾಷ್ಟ್ರೀಯ ಅಸೆಂಬ್ಲಿ ವಿಸರ್ಜಿಸಿದ್ದ ಡೆಪ್ಯುಟಿ ಸ್ಪೀಕರ್ ನಿರ್ಧಾರ ಅಸಂವಿಧಾನಿಕ ಎಂದಿರುವ ಪಾಕ್ ಸುಪ್ರೀಂಕೋರ್ಟ್, ರಾಷ್ಟ್ರೀಯ ಅಸೆಂಬ್ಲಿಯನ್ನು ಮರುಸ್ಥಾಪಿಸಿ ಶನಿವಾರ ಬೆಳಗ್ಗೆ 10 ಗಂಟೆಗೆ ಬಹುಮತ ಸಾಬೀತುಪಡಿಸುವಂತೆ ಪ್ರಧಾನ ಮಂತ್ರಿ ಇಮ್ರಾನ್ ಖಾನ್ ಗೆ ಸೂಚಿಸಿದೆ. ಹೀಗಾಗಿ ಮಾಜಿ ಕ್ರಿಕೆಟರ್ ಇಮ್ರಾನ್ ಖಾನ್ ಗೆ ನಾಳೆ ಮಾಡು ಇಲ್ಲವೇ ಮಡಿ ಎಂಬಂತಹ ಸ್ಥಿತಿ.

ಅವಿಶ್ವಾಸ ಗೊತ್ತುವಳಿ ಎದುರಿಸುವುದಕ್ಕೂ ಮುನ್ನ ಇಮ್ರಾನ್ ಖಾನ್ ಶುಕ್ರವಾರ ರಾತ್ರಿ ದೇಶವನ್ನುದ್ದೇಶಿಸಿ ಮಾತನಾಡಲು ಸಿದ್ಧರಾಗಿದ್ದಾರೆ. ಅವಿಶ್ವಾಸ ನಿರ್ಣಯ ಎದುರಿಸುವ ಮುಂಚಿತವಾಗಿ ಇಮ್ರಾನ್ ಖಾನ್ ಅವರು ಸೋಲುವ ಸಾಧ್ಯತೆಯಿದೆ. ಹೀಗಾಗಿ ನಾಟಕೀಯ ಪ್ರಸಂಗಗಳ ವಾರದ ನಂತರ ಮುಖಭಂಗ ತಪ್ಪಿಸಿಕೊಳ್ಳಲು ರಾಜೀನಾಮೆ ನೀಡಬಹುದು. ರಾಜೀನಾಮೆ ನೀಡದೇ  ಮತ್ತೊಂದು ಆಶ್ಚರ್ಯಕರ ನಡೆಯನ್ನ ತೋರಿಸಲಿದ್ದಾರಾ ಎಂಬ ವ್ಯಾಪಕ ಊಹಾಪೋಹಗಳಿವೆ.

ಇಮ್ರಾನ್ ಖಾನ್ ಬಹುಮತ ಸಾಬೀತುಪಡಿಸುವಲ್ಲಿ ಸೋತರೆ, ಅವರು ಅವಿಶ್ವಾಸ ಮತದ ಮೂಲಕ ಪದಚ್ಯುತಗೊಂಡ ದೇಶದ ಮೊದಲ ಪ್ರಧಾನಿಯಾಗುತ್ತಾರೆ. ವಿರೋಧ ಪಕ್ಷವು ನಂತರ ತನ್ನದೇ ಆದ ಪ್ರಧಾನ ಮಂತ್ರಿಯನ್ನು ನಾಮನಿರ್ದೇಶನ ಮಾಡಬಹುದು ಮತ್ತು ಆಗಸ್ಟ್ 2023 ರವರೆಗೆ ಅಧಿಕಾರವನ್ನು ಹೊಂದಬಹುದು, ಆ ದಿನಾಂಕದೊಳಗೆ ಹೊಸ ಚುನಾವಣೆಗಳು ನಡೆಯಬೇಕು.

342 ಸ್ಥಾನಗಳ ರಾಷ್ಟ್ರೀಯ ಅಸೆಂಬ್ಲಿಯಲ್ಲಿ ತಾವು 172 ಕ್ಕೂ ಹೆಚ್ಚು ಮತಗಳನ್ನು ಹೊಂದಿದ್ತೀವಿ ಎಂದು ಪ್ರತಿಪಕ್ಷವು ಹೇಳುತ್ತಿದೆ. ಇಮ್ರಾನ್ ಖಾನ್ ನೇತೃತ್ವದ ಪಿಟಿಐ ಪಕ್ಷದ ಹಲವು ಸದಸ್ಯರೇ ಇಮ್ರಾನ್ ಖಾನ್ ವಿರುದ್ಧ ನಿಂತಿದ್ದಾರೆ.

ಪಾಕಿಸ್ತಾನವು ತನ್ನ 75 ವರ್ಷಗಳ ಅಸ್ತಿತ್ವದ ಬಹುಪಾಲು ರಾಜಕೀಯ ಬಿಕ್ಕಟ್ಟಿನಿಂದ ಜರ್ಜರಿತವಾಗಿದೆ ಮತ್ತು ಯಾವುದೇ ಪ್ರಧಾನಿ ಪೂರ್ಣಾವಧಿಯನ್ನು ನೋಡಿಲ್ಲ.

ಸುದ್ದಿ ಓದಿ