ನೇಪಾಳದ ನೆಲದಲ್ಲಿ ನಿಂತು ‘ರಾಮ ಮಂದಿರ’ ಪ್ರಸ್ತಾಪಿಸಿದ ಪ್ರಧಾನಿ ಮೋದಿ
ಲುಂಬಿನಿ:ಮೇ 16 : ನೇಪಾಳ ಪ್ರವಾಸದಲ್ಲಿರೋ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ನೇಪಾಳದ ಪ್ರಧಾನಿ ಶೇರ್ ಬಹದ್ದೂರ್ ದೇವುಬಾ ಅವರೊಂದಿಗೆ ದ್ವಿಪಕ್ಷೀಯ ಮಾತುಕತೆ ನಡೆಸಿದರು. ತಮ್ಮ ದ್ವಿಪಕ್ಷೀಯ ಮಾತುಕತೆಯಲ್ಲಿ ಪ್ರಧಾನಿ ಮೋದಿ ಮತ್ತು ದೇವುಬಾ ಅವರು ಉಭಯ ದೇಶಗಳ ಸಹಕಾರವನ್ನು ಬಲಪಡಿಸುವ ಮತ್ತು ಬಹುಮುಖಿ ದ್ವಿಪಕ್ಷೀಯ ಪಾಲುದಾರಿಕೆಯಲ್ಲಿ ಹೊಸ ಕ್ಷೇತ್ರಗಳನ್ನು ಅಭಿವೃದ್ಧಿಪಡಿಸುವ ಮಾರ್ಗಗಳನ್ನು ಚರ್ಚಿಸಿದರು.
ಸಾಂಸ್ಕೃತಿಕ ಮತ್ತು ಶೈಕ್ಷಣಿಕ ವಲಯಗಳಲ್ಲಿ ಸಹಕಾರಕ್ಕಾಗಿ 6 ಒಪ್ಪಂದಗಳಿಗೆ ಸಹಿ ಹಾಕಲಾಯಿತು. ಇವುಗಳಲ್ಲಿ ನೇಪಾಳದಲ್ಲಿ ಲುಂಬಿನಿ ವಸ್ತುಸಂಗ್ರಹಾಲಯದ ನಿರ್ಮಾಣ ಮತ್ತು ಲುಂಬಿನಿ ಬೌದ್ಧ ವಿಶ್ವವಿದ್ಯಾಲಯದಲ್ಲಿ ಬೌದ್ಧ ಅಧ್ಯಯನಕ್ಕಾಗಿ ಡಾ. ಅಂಬೇಡ್ಕರ್ ಪೀಠದ ಸ್ಥಾಪನೆ ಸೇರಿವೆ.
ದ್ವಿಪಕ್ಷೀಯ ಮಾತುಕತೆ ವೇಳೆ ಪ್ರಧಾನಿ ಮೋದಿ, ಭಾರತ ಮತ್ತು ನೇಪಾಳ ನಡುವೆ ಸ್ನೇಹ ಸದಾ ಬಲಗೊಳ್ಳುತ್ತಿರುತ್ತದೆ. ಇಂದು ಸೃಷ್ಟಿಯಾಗುತ್ತಿರುವ ಜಾಗತಿಕ ಪರಿಸ್ಥಿತಿಗಳಲ್ಲಿ ನಮ್ಮ ನಿಕಟತೆಯು ಇಡೀ ಮಾನವಕುಲಕ್ಕೆ ಸೇವೆ ಸಲ್ಲಿಸುತ್ತದೆ ಎಂದು ಪ್ರಧಾನಿ ಹೇಳಿದರು. ಇಂದು ಭಾರತದಲ್ಲಿ ಭಗವಾನ್ ಶ್ರೀರಾಮನ ಭವ್ಯವಾದ ದೇವಾಲಯವನ್ನು ನಿರ್ಮಿಸುತ್ತಿರುವಾಗ, ನೇಪಾಳದ ಜನರು ಅಷ್ಟೇ ಸಂತೋಷಪಟ್ಟಿದ್ದಾರೆಂದು ನನಗೆ ತಿಳಿದಿದೆ ಎಂದರು.
ಇಂದು ಮುಂಜಾನೆ, ಪ್ರಧಾನಿ ಮೋದಿ ಅವರು ನೇಪಾಳದ ಪ್ರಧಾನಿ ಮತ್ತು ಅವರ ಸಂಗಾತಿ ಡಾ ಅರ್ಜು ರಾಣಾ ದೇವುಬಾ ಅವರೊಂದಿಗೆ ಲುಂಬಿನಿಯ ಮಾಯಾ ದೇವಿ ದೇವಸ್ಥಾನದಲ್ಲಿ ಪ್ರಾರ್ಥಿಸಿದರು.
ದೇವಾಲಯದ ಪಕ್ಕದಲ್ಲಿರುವ ಅಶೋಕ ಸ್ತಂಭದ ಬಳಿಯೂ ಉಭಯ ಪ್ರಧಾನಿಗಳು ದೀಪ ಬೆಳಗಿಸಿದರು. ಇದು 2014 ರಿಂದ ನೇಪಾಳಕ್ಕೆ ಪ್ರಧಾನಿ ಮೋದಿಯವರ ಐದನೇ ಭೇಟಿಯಾಗಿದೆ.