ವ್ಯಾಟಿಕನ್ ಸಿಟಿಯಲ್ಲಿ ಪೋಪ್ ಫ್ರಾನ್ಸಿಸ್ ಭೇಟಿ ಮಾಡಿದ ಪ್ರಧಾನಿ ಮೋದಿ
ವ್ಯಾಟಿಕನ್ ಸಿಟಿ, ಅ 30: ಇಟಲಿಯ ರೋಮ್‌ನಲ್ಲಿರುವ ಪ್ರಧಾನಮಂತ್ರಿ ನರೇಂದ್ರ ಮೋದಿ, ಕ್ರೈಸ್ತರ ಪವಿತ್ರ ಕ್ಷೇತ್ರ ವ್ಯಾಟಿಕನ್ ಸಿಟಿಗೆ ತೆರಳಿ ಪೋಪ್ ಫ್ರಾನ್ಸಿಸ್ ಅವರನ್ನು ಭೇಟಿ ಮಾಡಿದರು.
ವ್ಯಾಟಿಕನ್ ಸಿಟಿಗೆ ಆಗಮಿಸಿದ ಭಾರತ ಪ್ರಧಾನಿ ಮೋದಿ ಅವರನ್ನು ವ್ಯಾಟಿಕನ್ ಸಿಟಿಯ ಅಧಿಕಾರಿಗಳು ಮತ್ತಿತರರು ಹಾರ್ದಿಕವಾಗಿ ಬರಮಾಡಿಕೊಂಡರು.
ಈ ಸಂದರ್ಭದಲ್ಲಿ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ಡೋವಲ್, ವಿದೇಶಾಂಗ ವ್ಯವಹಾರಗಳ ಸಚಿವ ಡಾ. ಎಸ್. ಜೈಶಂಕರ್ ಪ್ರಧಾನಿ ಅವರೊಂದಿಗಿದ್ದರು.
ಇಂದು ನಾಳೆ ನಡೆಯಲಿರುವ ರೋಮ್ ನಲ್ಲಿ ನಡೆಯಲಿರುವ ೧೬ನೇ ಜಿ-೨೦ ದೇಶಗಳ ಶೃಂಗಸಭೆಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಭಾಗವಹಿಸಲಿದ್ದಾರೆ. ಇಟಲಿಯ ಪ್ರಧಾನಿ ಮಾರಿಯೊ ದ್ರಾಘಿ ಅವರ ಆಹ್ವಾನದ ಮೇರೆಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಈ ಶೃಂಗಸಭೆಯಲ್ಲಿ ಪಾಲ್ಗೊಳ್ಳುತ್ತಿದ್ದಾರೆ.
ಜಿ-೨೦ ಸದಸ್ಯ ರಾಷ್ಟ್ರಗಳ ಹಾಗೂ ಐರೋಪ್ಯ ಒಕ್ಕೂಟದ ಪ್ರಮುಖರು ಮತ್ತು ಆಹ್ವಾನಿತ ರಾಷ್ಟ್ರಗಳ ಮುಖ್ಯಸ್ಥರು ಶೃಂಗಸಭೆಯಲ್ಲಿ ಭಾಗವಹಿಸುವರು.
ಇದಕ್ಕೂ ಮುನ್ನ ರೋಮ್‌ನಲ್ಲಿ ನಿನ್ನೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು, ಇಟಲಿಯ ಪ್ರಧಾನಮಂತ್ರಿ ಮಾರಿಯೊ ದ್ರಾಘಿ ಅವರೊಂದಿಗೆ ನಿಯೋಗ ಮಟ್ಟದ ಮಾತುಕತೆ ನಡೆಸಿದರು.
ಉಭಯ ದೇಶಗಳ ನಡುವೆ ನವೀಕರಿಸಬಹುದಾದ ಮತ್ತು ಶುದ್ಧ ಇಂಧನ ವಲಯಗಳಲ್ಲಿ ದ್ವಿಪಕ್ಷೀಯ ಸಹಕಾರಕ್ಕೆ ಹೊಸ ಆಯಾಮ ನೀಡುವ ಕುರಿತು ಚರ್ಚಿಸಲಾಯಿತು. ಅಲ್ಲದೆ ಭಾರತ ಮತ್ತು ಇಟಲಿ ೨೦೨೦-೨೦೨೫ರ ದ್ವಿಪಕ್ಷೀಯ ಪಾಲುದಾರಿಕೆ ಕ್ರಿಯಾಯೋಜನೆಯನ್ನು ಪುನರ್ ಪರಿಶೀಲಿಸಿದವು ಮತ್ತು ವ್ಯಾಪಾರ ಹಾಗೂ ಹೂಡಿಕೆಯ ಸಂಬಂಧಗಳನ್ನು ಮತ್ತಷ್ಟು ವಿಸ್ತರಿಸುವ ಬದ್ಧತೆಯನ್ನು ಪುನರುಚ್ಛರಿಸಿದವು.
ಅಲ್ಲದೆ ಕಾರಿಡಾರ್ ಯೋಜನೆಗಳು, ಸ್ಮಾರ್ಟ್ ಗ್ರಿಡ್ ಸ್ಥಾಪನೆ, ಇಂಧನ ಸಂಗ್ರಹ ಪರಿಹಾರಗಳು, ಅನಿಲ ಸಾಗಾಣೆ, ಗ್ರೀನ್ ಹೈಡ್ರೋಜನ್ ಅಭಿವೃದ್ಧಿ ಮತ್ತು ನಿಯೋಜನೆ, ಜೈವಿಕ ಇಂಧನಗಳ ಉತ್ತೇಜನ ಕುರಿತಂತೆ ಕಾರ್ಯತಂತ್ರ ಪಾಲುದಾರಿಕೆಯ ಅಂಶಗಳನ್ನು ಉಭಯ ನಾಯಕರು ಜಂಟಿ ಹೇಳಿಕೆಯಲ್ಲಿ ಬಿಡುಗಡೆ ಮಾಡಿದವು.
ಹವಾಮಾನ ವೈಪರೀತ್ಯದ ವಿರುದ್ಧ ಹೋರಾಡಲು ಶುದ್ಧ ಇಂಧನಕ್ಕೆ ಪರಿವರ್ತನೆಗೊಳ್ಳುವ ಕಾರ್ಯಕ್ಕೆ ವೇಗ ನೀಡಲು ಉಭಯ ನಾಯಕರು ಸಂಕಲ್ಪ ಮಾಡಿದರು.
ಶುದ್ಧ ಇಂಧನ ಮತ್ತು ನವೀಕರಿಸಬಹುದಾದ ಇಂಧನ ವಲಯಗಳಲ್ಲಿ ಎರಡೂ ಕಡೆಯಿಂದ ಹೂಡಿಕೆ ಮಾಡುವ ಕುರಿತು ಉಭಯ ನಾಯಕರು ಚರ್ಚಿಸಿದರು.
ನಂತರ ಪ್ರಧಾನಮಂತ್ರಿ ನರೇಂದ್ರ ಮೋದಿ ತಮ್ಮ ಟ್ವೀಟ್‌ನಲ್ಲಿ ಉಭಯ ದೇಶಗಳ ನಡುವೆ ಸಾಂಸ್ಕೃತಿಕ ಸಹಕಾರ, ಆರ್ಥಿಕ ಸಂಬಂಧಗಳ ವೃದ್ಧಿಗೆ ಹೆಚ್ಚಿನ ಅವಕಾಶಗಳಿವೆ. ಉಭಯ ದೇಶಗಳು ಹೆಚ್ಚಿನ ಪರಿಸರಸ್ನೇಹಿ ವಾತಾವರಣ ಸೃಷ್ಟಿಸಲು ಜತೆಗೂಡಿ ಕೆಲಸ ಮಾಡಲಿವೆ ಎಂದು ತಿಳಿಸಿದ್ದಾರೆ.
ಸಭೆಯ ನಂತರ ಮಾಧ್ಯಮಗಳಿಗೆ ಮಾಹಿತಿ ನೀಡಿದ ವಿದೇಶಾಂಗ ಕಾರ್ಯದರ್ಶಿ ಹರ್ಷವರ್ಧನ್ ಶ್ರಿಂಗ್ಲಾ, ಐರೋಪ್ಯ ಒಕ್ಕೂಟ ಮತ್ತು ಐರೋಪ್ಯ ಮಂಡಳಿಯ ಅಧ್ಯಕ್ಷರ ಜತೆ ಪ್ರಧಾನಮಂತ್ರಿ ಅವರು, ಹವಾಮಾನ ವೈಪರೀತ್ಯ ಮತ್ತು ಆಫ್ಘಾನಿಸ್ತಾನದ ಸ್ಥಿತಿಗತಿ ಕುರಿತು ಭಾರತದ ನಿಲುವಿನ ಕುರಿತು ಪ್ರಸ್ತಾಪಿಸಿದರು.
ಜಿ೨೦ ಶೃಂಗಸಭೆಯಲ್ಲಿ ಪ್ರಧಾನಮಂತ್ರಿ ಅವರು, ಇನ್ನೂ ಹಲವು ವಿಚಾರಗಳನ್ನು ಪ್ರಸ್ತಾಪಿಸಲಿದ್ದಾರೆ, ಅಲ್ಲದೆ ಫ್ರಾನ್ಸ್ ಮತ್ತು ಇಂಡೋನೇಷ್ಯಾ ಅಧ್ಯಕ್ಷರು ಮತ್ತು ಸಿಂಗಾಪುರದ ಪ್ರಧಾನಮಂತ್ರಿ ಅವರನ್ನು ನರೇಂದ್ರ ಮೋದಿ ಅವರು ಪ್ರತ್ಯೇಕವಾಗಿ ಭೇಟಿ ಮಾಡಿ, ದ್ವಿಪಕ್ಷೀಯ ಸಂಬಂಧಗಳ ಕುರಿತು ಚರ್ಚೆ ನಡೆಸಲಿದ್ದಾರೆ.