ಅಂತರರಾಷ್ಟ್ರೀಯ

ಪಿಎಂ ಇಮ್ರಾನ್ ಖಾನ್ ಭಾಷಣ ರದ್ದು; ಕೊನೇ ಬಾಲ್ ವರೆಗೂ ಹೋರಾಡ್ತಾರಾ?

ಪಿಎಂ ಇಮ್ರಾನ್ ಖಾನ್ ಭಾಷಣ ರದ್ದು; ಕೊನೇ ಬಾಲ್ ವರೆಗೂ ಹೋರಾಡ್ತಾರಾ?

ಇಸ್ಲಾಮಾಬಾದ್: ಮಾರ್ಚ್ 30: ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಸರ್ಕಾರ ಮುಳುಗುತ್ತಿದೆ. ಗುರುವಾರ ಪಾಕಿಸ್ತಾನ ನ್ಯಾಷನಲ್ ಅಸೆಂಬ್ಲಿಯಲ್ಲಿ ಅವಿಶ್ವಾಸ ನಿರ್ಣಯದ ಫೈನಲ್ ಆಟ ನಡೆಯಲಿದೆ. ಬಹುತೇಕ ಮಾಜಿ ಕ್ರಿಕೆಟರ್ ಇಮ್ರಾನ್ ಖಾನ್ ಸರ್ಕಾರ ಬಿದ್ದುಹೋಗುವ ಎಲ್ಲಾ ಲಕ್ಷಣಗಳು ಗೋಚರಿಸ್ತಿವೆ.

ಪಾಕಿಸ್ತಾನದ ಸೇನೆ ಸೇರಿದಂತೆ ವಿಪಕ್ಷಗಳ ವಿಶ್ವಾಸ ಕಳೆದುಕೊಂಡಿರುವ ಇಮ್ರಾನ್ ಖಾನ್ ಸರ್ಕಾರ ನಾಳೆ ಫೀಲ್ಡ್ ನಿಂದ ಹೊರಹೋಗುವುದು ಖಚಿತವಾಗಿದೆ. ಆದರೂ ಇಮ್ರಾನ್ ಖಾನ್ ಗೆ ಅದ್ಯಾವ ವಿಶ್ವಾಸವಿದೆಯೋ? ಅವಿಶ್ವಾಸ ಕಳ್ಕೊಂಡಿರೋ ಇಮ್ರಾನ್ ಖಾನ್ ರಾಜೀನಾಮೆ ನೀಡಿ ಇಂದು ದೇಶವನ್ನುದ್ದೇಶಿಸಿ ಮಾತನಾಡ್ತಾರೆ ಎಂಬ ಮಾತುಗಳಿಗೆ ಪೂರ್ಣ ವಿರಾಮ ಹಾಕಿದ್ದಾರೆ. ದೇಶವನ್ನುದ್ದೇಶಿಸಿ ಮಾತ್ನಾಡುವ ನಿರ್ಧಾರದಿಂದ ಇಮ್ರಾನ್ ಖಾನ್ ಹಿಂದೆ ಸರಿದಿದ್ದು ಸೂಪರ್ ಓವರ್ ನಂತಹ ಕುತೂಹಲವನ್ನ ಹೆಚ್ಚಿಸಿದ್ದಾರೆ. ರಾಜೀನಾಮೆಯನ್ನೂ ನೀಡದೇ, ರಾಷ್ಟ್ರವನ್ನುದ್ದೇಶಿಸಿ ಭಾಷಣ ಮಾಡದೇ ನಾಳಿನ ಅವಿಶ್ವಾಸ ನಿರ್ಣಯ ಮೇಲಿನ ಚರ್ಚೆಗೆ ಸಿದ್ಧರಾಗಿರುವಂತೆ ಕಾಣ್ತಿದೆ.

“ಇಮ್ರಾನ್ ಖಾನ್ ಕೊನೆಯ ಎಸೆತದವರೆಗೂ ಹೋರಾಡುವ ಆಟಗಾರ. ರಾಜೀನಾಮೆ ನೀಡುವುದಿಲ್ಲ. ಪಂದ್ಯವಿರುತ್ತದೆ, ಸ್ನೇಹಿತರು ಮತ್ತು ವೈರಿಗಳಿಬ್ಬರೂ ಅದನ್ನು ವೀಕ್ಷಿಸುತ್ತಾರೆ” ಎಂದು ಪಾಕ್ ಸಚಿವ ಫವಾದ್ ಚೌಧರಿ ಟ್ವೀಟ್ ಮಾಡಿದ್ದಾರೆ. ಅವಿಶ್ವಾಸ ನಿರ್ಣಯದ ಮೇಲಿನ ಚರ್ಚೆಯು ಗುರುವಾರ ಪ್ರಾರಂಭವಾಗಲಿದೆ. ಇಮ್ರಾನ್ ಖಾನ್ ಅವರು ತಮ್ಮದೇ ಆದ ಪಾಕಿಸ್ತಾನ್ ತೆಹ್ರೀಕ್-ಇ-ಇನ್ಸಾಫ್ (ಪಿಟಿಐ) ಸದಸ್ಯರನ್ನು ಬದಿಯಲ್ಲಿ ಇರಿಸಿಕೊಳ್ಳಲು ಹರಸಾಹಸ ಪಡುತ್ತಿದ್ದಾರೆ.

342ರ ಸದಸ್ಯ ಬಲದ ಸಂಸತ್ ನಲ್ಲಿ ವಿಪಕ್ಷಗಳು ಇಮ್ರಾನ್ ಸರ್ಕಾರವನ್ನ ಕಿತ್ತೊಗೆಯಲು 172 ಸದಸ್ಯರ ಬೆಂಬಲವನ್ನು ಪಡೆಯುವ ವಿಶ್ವಾಸದಲ್ಲಿವೆ. ಆದರೆ ಸರ್ಕಾರವು ವಿಪಕ್ಷಗಳ ಪ್ರಯತ್ನವನ್ನು ವಿಫಲಗೊಳಿಸಲು ಸದನದಲ್ಲಿ ಕೊನೇ ಕ್ಷಣದವರೆಗೂ ಹೋರಾಡುವ ವಿಶ್ವಾಸದಲ್ಲಿದೆ. ಮಾಜಿ ಕ್ರಿಕೆಟಿಗ ಇಮ್ರಾನ್ ಖಾನ್ 2018 ರಲ್ಲಿ ‘ನಯಾ ಪಾಕಿಸ್ತಾನ’ ರಚಿಸುವ ಭರವಸೆಯೊಂದಿಗೆ ಅಧಿಕಾರಕ್ಕೆ ಬಂದರು. ಆದರೆ ಅಧಿಕಾರಕ್ಕೆ ಬಂದ ಬಳಿಕ ದೇಶದ ಆರ್ಥಿಕತೆ ಮತ್ತು ವಿದೇಶಾಂಗ ನೀತಿಯನ್ನು ನಿರ್ವಹಿಸುವಲ್ಲಿ ಎಡವಿದ್ದಾರೆಂದು ವಿರೋಧ ಪಕ್ಷದವರು ಆರೋಪಿಸಿದ್ದಾರೆ.

ಇಮ್ರಾನ್ ಖಾನ್ ನೇತೃತ್ವದ ಪಾಕಿಸ್ತಾನ್ ತೆಹ್ರೀಕ್-ಎ-ಇನ್ಸಾಫ್ (ಪಿಟಿಐ),ಪಕ್ಷವು 155 ಸದಸ್ಯರನ್ನು ಹೊಂದಿದೆ ಸರ್ಕಾರ ಉಳಿಸಿಕೊಳ್ಳಲು ಕನಿಷ್ಠ 172 ಶಾಸಕರ ಬೆಂಬಲ ಬೇಕಿದೆ.
ಇದುವರೆಗೂ ಪಾಕಿಸ್ತಾನದ ಇತಿಹಾಸದಲ್ಲಿ ಯಾವುದೇ ಪ್ರಧಾನಿ 5 ವರ್ಷದ ಪೂರ್ಣಾವಧಿವರೆಗೆ ಅಧಿಕಾರ ನಡೆಸಿಲ್ಲ. ಒಂದು ವೇಳೆ ಇಮ್ರಾನ್ ಖಾನ್ ವಿಶ್ವಾಸ ಗಳಿಸುವ ಆಟದಲ್ಲಿ ಸೋತ್ರೆ ಮುಂದಿನ ಪ್ರಧಾನಿ ರೇಸ್ ನಲ್ಲಿ ಮಾಜಿ ಪ್ರಧಾನಿ ನವಾಜ್ ಷರೀಫ್ ಸೋದರ ಶೆಹ್ ನಾಜ್ ಷರೀಫ್, ಬಿಲಾವಾಲ್ ಬುಟ್ಟೋ ಜರ್ದಾರಿ ಇದ್ದಾರೆ

ಸುದ್ದಿ ಓದಿ