ರಾಜ್ಯ ರೈತ, ಕಬ್ಬು ಬೆಳೆಗಾರರ ಸಂಘದ ಸದಸ್ಯರ ಅಹೋರಾತ್ರಿ ಧರಣಿ
ಜಮಖಂಡಿ 06: ರಾಜ್ಯ ಸರಕಾರ, ಜಿಲ್ಲಾಡಳಿತ ಮತ್ತು ಸಕ್ಕರೆ ಕಾರ್ಖಾನೆ ಮಾಲೀಕರ ಸಭೆ ವಿಫಲಗೊಳ್ಳುತ್ತಿರುವ ಹಿನ್ನಲೆಯಲ್ಲಿ ಕಳೆದ 5 ದಿನಗಳಿಂದ ರಾಜ್ಯ ರೈತ ಸಂಘ ಮತ್ತು ಕಬ್ಬು ಬೆಳೆಗಾರರ ಸಂಘ ಸದಸ್ಯರು ತಾಲೂಕ ಆಡಳಿತ ಸೌಧ ಆವರಣದಲ್ಲಿ ಅಹೋರಾತ್ರಿ ಧರಣಿ ಆರಂಭಿಸಿದ್ದಾರೆ.
ತಾಲೂಕಿನಲ್ಲಿ ಸಿದ್ದಾಪೂರದ ಪ್ರಭುಲಿಂಗೇಶ್ವರ ಕಾರ್ಖಾನೆ, ಆಲಬಾಳದ ಸಾಯಿಪ್ರೀಯಾ ಶುಗರ್ಸ್ ಹಿರೇಪಸಲಗಿಯ ಜಮಖಂಡಿ ಶುಗರ್ಸ್ ಕಾರ್ಖಾನೆಗಳು ಆರಂಭಗೊಂಡು ಕಬ್ಬು ನುರಿಸುವ ಸಂದರ್ಭದಲ್ಲಿ ದರ ನಿಗದಿಗೆ ಒತ್ತಾಯಿಸಿ ನಡೆದ ಪ್ರತಿಭಟನೆ ಅಂತ್ಯವಾಗುತ್ತಿಲ್ಲ. ರೈತರು ದರ ನಿಗದಿ ಮಾಡಲು ಒತ್ತಾಯಿಸಿದಾಗ ಈಗಾಗಲೇ ರೈತರ ಸಭೆಯಲ್ಲಿ ಜಮಖಂಡಿ ಶುಗರ್ಸ್ ಪ್ರತಿ ಒಂದು ಟನಗೆ 2800 ದರ ಘೋಷಣೆ ಮಾಡುವ ಮೂಲಕ ಜಿಲ್ಲೆಯಲ್ಲಿ ಶುಗರ್ಸ್ ಕಾರ್ಖಾನೆಗಳು ಹೆಚ್ಚು ನೀಡಿದ ಕಾರ್ಖಾನೆ ದರವನ್ನು ನಾವು ಸಹ ನೀಡುವುದಾಗಿ ಭರವಸೆ ನೀಡಿದೆ.
ವರ್ಷಗಟ್ಟಲೇ ಕಬ್ಬು ಬೆಳೆದು ಕಾರ್ಖಾನೆ ಸಾಗಿಸುವ ಸಂದರ್ಭದಲ್ಲಿ ದರ ನಿಗದಿ ಮಾಡದೇ ಕಬ್ಬು ನುರಿಸುವ ಕಾರ್ಯ ಆರಂಭಿಸಿರುವ ಹಿನ್ನಲೆಯಲ್ಲಿ ತಾಲೂಕಿನ ರೈತರು ಆಕ್ರೋಶಗೊಂಡಿದ್ದು, ಮನೆಬಿಟ್ಟು ತಾಲೂಕಿನ ಎಲ್ಲ ಕಾರ್ಖಾನೆಗಳ ಗೇಟಗಳ ಮುಂದೆ ತಾಲೂಕ ಆಡಳಿತ ಆವರಣದಲ್ಲಿ ಊಟಕ್ಕೆ ಅವಶ್ಯಕ ಆಹಾರ ಸಿದ್ದಪಡಿಸಿಕೊಂಡು ಸೇವನೆ ಮಾಡುವ ದಿನದ 24 ಗಂಟೆ ಅಹೋರಾತ್ರಿ ಧರಣಿಯಲ್ಲಿ ತೊಡಗಿಕೊಂಡಿದ್ದಾರೆ.
ರೈತರು ಪ್ರತಿ ಒಂದು ಟನಗೆ ಕನಿಷ್ಠ 3500 ರೂ.ಬೆಲೆ ನಿಗದಿ ಮಾಡುವಂತೆ ಒತ್ತಾಯಿಸುತ್ತಿದ್ದು, ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ರೈತರ ಮತ್ತು ಕಾರ್ಖಾನೆ ಮಾಲಿಕರ ದರ ಹೊಂದಾಣಿಕೆ ಆಗದ ಹಿನ್ನಲೆಯಲ್ಲಿ ಸಭೆ ಮುಂದೂಡಲಾಗಿದೆ. ಜಮಖಂಡಿ ಶುಗರ್ಸ್ ನವೆಂಬರ್ 8 ರಂದು ಅಂತಿಮ ದರ ಘೋಷಣೆ ಮಾಡಲಿದೆ ಸರಕಾರಿ ಮೂಲಗಳು ತಿಳಿಸಿವೆ. ಕಾರ್ಖಾನೆಗಳು ಮೊದಲು ಕಂತು 2900 ಘೋಷಣೆ ಮಾಡುವ ಮೂಲಕ ಕಾರ್ಖಾನೆ ಆರಂಭಿಸಬೇಕು. ಉಳಿದ ಎರಡು ಕಂತುಗಳ ಹಣ ಬಿಡುಗಡೆ ಚರ್ಚೆ ನಡೆಯಲಿದೆಂದು ಮಾತುಗಳು ಕೇಳಿ ಬರುತ್ತಿವೆ.