ಉಚಿತ ಆರೋಗ್ಯ ಶಿಬಿರ ಆಯೋಜನೆ ಕಾರ್ಯ ಶ್ಲಾಘನೀಯ
ಸವದತ್ತಿ 08: ವಯೋ ಸಹಜ ಕಾಯಲೆಗಳಿಂದ ಬಳಲುತ್ತಿರುವ ನಾಗರೀಕರಿಗೆ ಇಂದು ಅರೋಗ್ಯ ಭಾಗ್ಯವನ್ನು ಕಲ್ಪಿಸುವ ನಿಟ್ಟಿನಲ್ಲಿ ಹಮ್ಮಿಕೊಂಡಿರುವ ಉಚಿತ ಆರೋಗ್ಯ ಶಿಬಿರದಂತ ಕಾರ್ಯ ಶ್ಲಾಘನೀಯ ಎಂದು ವಿಧಾನಸಭೆ ಉಪಸಭಾಧ್ಯಕ್ಷ ಆನಂದ ಮಾಮನಿ ಹೇಳಿದರು.
ಸ್ಥಳೀಯ ಎಸ್.ಜಿ.ಶಿಂತ್ರಿ ಆಂಗ್ಲ ಮಾದ್ಯಮ ಶಾಲೆಯ ಸಭಾಭವನದಲ್ಲಿ ರಾಷ್ಟ್ರೀಯ ಸೇವಾ ಭಾರತಿ ಹಾಗೂ ಬಿಜೆಪಿ ಮಹಿಳಾ ಮೋರ್ಚಾ ಘಟಕದಿಂದ ಮಹಿಳಾ ದಿನಾಚರಣೆ ಅಂಗವಾಗಿ ಹಮ್ಮಿಕೊಂಡ ಉಚಿತ ಆರೋಗ್ಯ ತಪಾಸಣಾ ಮತ್ತು ರಕ್ತದಾನ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಬಡತನ ರೇಖೆಗಿಂತ ಕೆಳಗಿರುವಂತ ಜನರಿಗೆ ಸರಕಾರವು ಅನೇಕ ಸೌಲಭ್ಯಗಳನ್ನು ನೀಡುತ್ತಿದ್ದು, ಅದರ ಜೊತೆಯಾಗಿ ಸಂಘ ಸಂಸ್ಥೆಗಳು ಸಹಿತ ಆರೋಗ್ಯ ಶಿಬಿರಗಳನ್ನು ಆಯೋಜಿಸಿ ಜನರ ಸಮಸ್ಯೆಗಳಿಗೆ ಸ್ಪಂಧನೆ ನೀಡುತ್ತಿವೆ. ಸಾರ್ವಜನಿಕರು ಇದರ ಸಂಪೂರ್ಣ ಲಾಭವನ್ನು ಪಡೆದುಕೊಳ್ಳಬೇಕೆಂದರು. ಬರುವಂತ ದಿನಗಳಲ್ಲಿ ಯರಗಟ್ಟಿ, ಮುನವಳ್ಳಿ, ಸವದತ್ತಿಯಲ್ಲಿ ಬೃಹತ್ತ ಉಚಿತ ಆರೋಗ್ಯ ಶಿಬಿರಗಳನ್ನು ಆಯೋಜಿಸಲಾಗುತ್ತಿದೆ ಎಂದರು.
ಡಾ.ಗೀತಾ ಭರತ ಉತ್ತೂರ ಮಾತನಾಡಿದರು. ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷೆ ಡಾ.ನಯನಾ ಭಸ್ಮೆ, ಆರ್.ಎಸ್.ಎಸ್ ಮುಖಂಡ ಡಾ.ನರಸಿಂಹ ಕುಲಕರ್ಣಿ ಉಪಸ್ಥಿತರಿದ್ದರು.
ಲಕ್ಷ್ಮೀ ಆರಿಬೆಂಚಿ ಪ್ರಾರ್ಥಿಸಿದರು. ನ್ಯಾಯವಾದಿ ವೈ.ಎಮ್.ಕರಮಲ್ಲಪ್ಪನವರ ನಿರೂಪಿಸಿ ವಂದಿಸಿದರು.