ಅಂತರರಾಷ್ಟ್ರೀಯ

ಉಪಸಭಾಪತಿ ಮೇಲೆ ಪಾಕಿಸ್ತಾನದ ಪಂಜಾಬ್ ಅಸೆಂಬ್ಲಿಯಲ್ಲಿ ಹಿಗ್ಗಾಮುಗ್ಗ ಹಲ್ಲೆ

ಉಪಸಭಾಪತಿ ಮೇಲೆ ಪಾಕಿಸ್ತಾನದ ಪಂಜಾಬ್ ಅಸೆಂಬ್ಲಿಯಲ್ಲಿ ಹಿಗ್ಗಾಮುಗ್ಗ ಹಲ್ಲೆ

ಲಾಹೋರ್: ಏಪ್ರಿಲ್ 16: ಪಾಕಿಸ್ತಾನದ ಪಂಜಾಬ್ ಅಸೆಂಬ್ಲಿ ಶನಿವಾರ ಭಾರೀ ಗದ್ದಲ ಗಲಾಟೆಗೆ ಸಾಕ್ಷಿಯಾಯಿತು. ಪಂಜಾಬ್ ಪ್ರಾಂತ್ಯದ ನೂತನ ಮುಖ್ಯಮಂತ್ರಿಯನ್ನ ಆಯ್ಕೆ ಮಾಡಲು ವಿಶೇಷ ಅಧಿವೇಶನ ಕರೆಯಲಾಗಿತ್ತು. ಅಧಿವೇಶನದ ಅಧ್ಯಕ್ಷತೆ ವಹಿಸಿದ್ದ ಉಪ ಸ್ಪೀಕರ್ ದೋಸ್ತ್ ಮುಹಮ್ಮದ್ ಮಜಾರಿ ಅವರನ್ನ ಆಡಳಿತಾರೂಢ ಪಾಕಿಸ್ತಾನ್ ತೆಹ್ರೀಕ್-ಎ-ಇನ್ಸಾಫ್‌ನ ಶಾಸಕರು ಎಳೆದಾಡಿ ಹಲ್ಲೆ ಮಾಡಿರುವ ವರದಿಯಾಗಿದೆ.

ವೈರಲ್ ಆಗಿರುವ ವಿಡಿಯೋದಲ್ಲಿ ಪಿಟಿಐ ಶಾಸಕರು ದೋಸ್ತ್ ಮುಹಮ್ಮದ್ ಮಜಾರಿ ಅವರ ಕೂದಲು ಎಳೆದಾಡಿ, ಕಪಾಳಮೋಕ್ಷ ಮಾಡಿ ಗುದ್ದಿದ್ದಾರೆ. ತಕ್ಷಣ ಭದ್ರತಾ ಸಿಬ್ಬಂದಿ ಮಜಾರಿ ಅವರನ್ನ ರಕ್ಷಿಸಿದ್ದಾರೆ.

ಸಿಎಂ ರೇಸ್ ನಲ್ಲಿ ಪಾಕಿಸ್ತಾನ್ ಮುಸ್ಲಿಂ ಲೀಗ್‌ ಅಭ್ಯರ್ಥಿ, ಪ್ರಧಾನಿ ಶೆಹಬಾಜ್ ಷರೀಫ್ ಅವರ ಪುತ್ರ ಹಮ್ಜಾ ಶಹಭಾಜ್ ಹಾಗೂ ಪಿಟಿಐ ಬೆಂಬಲಿತ ಫರ್ವೇಜ್ ಇಲಾಹಿ ಸಿಎಂ ರೇಸ್‌ನಲ್ಲಿದ್ದರು.

ಮುಸ್ಲಿಂ ಲೀಗ್ ಅಭ್ಯರ್ಥಿಗೆ ಉಪ ಸ್ಪೀಕರ್ ದೋಸ್ತ್ ಮುಹಮ್ಮದ್ ಮಜಾರಿ ಸಹಾಯ ಮಾಡುತ್ತಿದ್ದಾರೆಂದು ಆರೋಪಿಸಿ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರ ನೇತೃತ್ವದ ಪಿಟಿಐ ಶಾಸಕರು ಮಜಾರಿ ಅವರನ್ನ ಎಳೆದಾಡಿ ಹಲ್ಲೆ ಮಾಡಿದ್ದಾರೆ. ಈ ಮೂಲಕ ಪಂಜಾಬ್ ಅಸೆಂಬ್ಲಿಯಲ್ಲಿ ದೊಡ್ಡ ಕೋಲಾಹಲವನ್ನೇ ಸೃಷ್ಟಿಸಿದರು.

ಪರಿಸ್ಥಿತಿ ಹತೋಟಿ ಮೀರುತ್ತಿದ್ದಂತೆ ವಿಧಾನಸಭೆಯ ಹೊರಗೆ ನಿಯೋಜನೆಗೊಂಡಿದ್ದ ಪೊಲೀಸರು ಸದನ ಪ್ರವೇಶಿಸಿದರು. ಪಂಜಾಬ್ ಅಸೆಂಬ್ಲಿ ಇತಿಹಾಸದಲ್ಲೇ ಪೊಲೀಸರು ಎಂದಿಗೂ ಪಂಜಾಬ್ ಅಸೆಂಬ್ಲಿಯನ್ನು ಪ್ರವೇಶಿಸಿರಲಿಲ್ಲ.ಇದೇ ಮೊದಲ ಬಾರಿಗೆ ಇಂತಹ ಘಟನೆ ನಡೆದಿದೆ.

ಪಂಜಾಬ್ ಅಸೆಂಬ್ಲಿಯ ಉಪಸಭಾಪತಿಯ ಮೇಲಿನ ದಾಳಿಯನ್ನು ಪ್ರಧಾನಿ ಶೆಹಬಾಜ್ ಖಂಡಿಸಿದ್ದಾರೆ . ಹೊಸ ಮುಖ್ಯಮಂತ್ರಿಯನ್ನು ಸುಗಮವಾಗಿ ಆಯ್ಕೆ ಮಾಡಬೇಕೆಂದು ಒತ್ತಾಯಿಸಿದ್ದಾರೆ.

ಸುದ್ದಿ ಓದಿ