ಡೆಲ್ಟಾ ದಷ್ಟು ಒಮಿಕ್ರೋನ್ ಅಪಾಯಕಾರಿಯಲ್ಲ; ದಕ್ಷಿಣ ಆಫ್ರಿಕಾ ವೈದ್ಯೆ
ಜೋಹಾನ್ಸ್ ಬರ್ಗ್, ಡಿ 3: ಕೋವಿಡ್ ವೈರಸ್ ಡೆಲ್ಟಾ ರೂಪಾಂತರಿಗಿಂತ ಒಮಿಕ್ರೋನ್ ತಳಿಯ ಗುಣ ಲಕ್ಷಣಗಳು ಲಘುವಾಗಿವೆ ಎಂದು ದಕ್ಷಿಣ ಆಫ್ರಿಕಾದಲ್ಲಿ ಒಮಿಕ್ರೋನ್ ಸೋಂಕಿತರಿಗೆ ಚಿಕಿತ್ಸೆ ನೀಡಿದ ವೈದ್ಯೆ, ದಕ್ಷಿಣ ಆಫ್ರಿಕಾ ವೈದ್ಯಕೀಯ ಅಸೋಸಿಯೇಷನ್ ಮುಖ್ಯಸ್ಥೆ ಡಾ.ಏಂಜೆಲಿಕ್ ಕೋಟ್ಜಿ ತಿಳಿಸಿದ್ದಾರೆ.
ಆಯಾಸ, ಮೈಕೈನೋವು ಒಮಿಕ್ರೋನ್ ರೂಪಾಂತರಿ ಪ್ರಧಾನ ಲಕ್ಷಣಗಳು. ಜೊತೆಗೆ ಸ್ವಲ್ಪ ತಲೆ ನೋವು, ಸುಸ್ತಾಗುವುದು ಕೂಡ ಕಂಡುಬರುತ್ತದೆ. ಆದರೆ, ವಾಸನೆ ಅಥವಾ ರುಚಿ ಕಳೆದುಕೊಳ್ಳುವುದು,ಮೂಗು ಕಟ್ಟುವುದು, ಜ್ವರದ ಲಕ್ಷಣಗಳು ಸೋಂಕಿತರಲ್ಲಿ ಕಂಡುಬಂದಿಲ್ಲ.
ಪ್ರಾಥಮಿಕ ಹಂತದಲ್ಲಿ ಡೆಲ್ಟಾ ರೂಪಾಂತರಿಯಷ್ಟು ಒಮಿಕ್ರೋನ್ ಅಪಾಯಕಾರಿ ಅಲ್ಲ. ಹೆಚ್ಚಿನ ಸಂಖ್ಯೆಯ ಸೋಂಕಿತರು ಆಸ್ಪತ್ರೆಗೆ ಸದ್ಯ ದಾಖಲಾಗುತ್ತಿಲ್ಲ ಎಂದು ಡಾ.ಏಂಜೆಲಿಕ್ ಕೋಟ್ಜಿ ಹೇಳಿದ್ದಾರೆ.
ಸದ್ಯದ ಮಟ್ಟಿಗೆ ಎಲ್ಲ ವಯಸ್ಸಿನವರು ಕೋವಿಡ್ ಲಸಿಕೆಯಿಂದ ಒಮಿಕ್ರೋನ್ನಿಂದ ಸ್ವಲ್ಪ ಪ್ರಮಾಣದಲ್ಲಿ ರಕ್ಷಿಸಿಕೊಳ್ಳಬಹುದು. ಲಸಿಕೆ ಪಡೆದ ಸೋಂಕಿತರಲ್ಲಿ ರೂಪಾಂತರಿಯ ಲಕ್ಷಣಗಳು ಲಘುವಾಗಿ ಕಂಡುಬಂದಿವೆ
ನವೆಂಬರ್ 25 ರಂದು ಒಮಿಕ್ರೋನ್ ರೂಪಾಂತರಿ ಬಗ್ಗೆ ದಕ್ಷಿಣಾ ಆಫ್ರಿಕಾ ಘೋಷಣೆ ಮಾಡಿದೆ . ನ.18 ರಂದು ಹಲವು ರೋಗಿಗಳು ತಲೆನೋವು, ಆಯಾಸದಿಂದ ಬಳಲುತ್ತಿದ್ದರಿಂದ ಅವರನ್ನು ಪರೀಕ್ಷೆ ನಡೆಸಿದಾಗ ಈ ರೂಪಾಂತರಿ ಪತ್ತೆಯಾಗಿದೆ.