ಅಂತರರಾಷ್ಟ್ರೀಯ

ಒಮಿಕ್ರಾನ್.. ಲಸಿಕೆ ಪಡೆದುಕೊಳ್ಳದವರು ಎಚ್ಚರ…. ವಿಶ್ವ ಆರೋಗ್ಯ ಸಂಸ್ಥೆ

ಒಮಿಕ್ರಾನ್.. ಲಸಿಕೆ ಪಡೆದುಕೊಳ್ಳದವರು ಎಚ್ಚರ…. ವಿಶ್ವ ಆರೋಗ್ಯ ಸಂಸ್ಥೆ

ಜಿನಿವಾ, ಜ ೧೩ ಕೊವಿಡ್ – ೧೯ ರೂಪಾಂತರಿ ಒಮಿಕ್ರಾನ್ ಬಹಳ ಆತಂಕಕಾರಿಯಾಗಿದ್ದು ವಿಶೇಷವಾಗಿ ಲಸಿಕೆ ಹಾಕಿಸಿಕೊಳ್ಳದವರು ಎಚ್ಚರ ವಹಿಸಬೇಕಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ. ಜಿನಿವಾದಲ್ಲಿ ಮಾಧ್ಯಮಗಳಿಗೆ ವರದಿ ನೀಡಿದ ಡಬ್ಲ್ಯುಹೆಚ್‌ಒ ಮಹಾ ನಿರ್ದೇಶಕ ಟೆಡೋಸ್ ಅಧಾನೋಮ್ ಗೆಬ್ರಿಯೇಸಸ್ ಡೆಲ್ಟಾಗೆ ಹೋಲಿಸಿದಲ್ಲಿ ಒಮಿಕ್ರಾನ್ ಅಷ್ಟೊಂದು ಮಾರಣಾಂತಿಕವಲ್ಲದಿದ್ದರೂ ಆತಂಕಕಾರಿಯಾಗಿದೆ ಅದರಲ್ಲೂ ಲಸಿಕೆ ಹಾಕಿಸಿಕೊಳ್ಳದಿರುವವರು ಹೆಚ್ಚಿನ ಜಾಗ್ರತೆವಹಿಸಬೇಕಿದೆ ಎಂದು ಹೇಳಿದ್ದಾರೆ. ತೀವ್ರವಾಗಿ ಹರಡುತ್ತಿರುವ ಒಮಿಕ್ರಾನ್ ಎಲ್ಲ ದೇಶಗಳಲ್ಲಿ ಡೆಲ್ಟಾ ಸ್ಥಾನವನ್ನು ಆಕ್ರಮಿಸುತ್ತಿದೆ ಎಂದು ಹೇಳಿದ್ದಾರೆ.
ಆಫ್ರಿಕಾದ ಲಸಿಕಾಕರಣದ ಬಗ್ಗೆ ವಿವರಿಸಿದ ಗೆಬ್ರಿಯೇಸಸ್ ಆಫ್ರಿಕಾದಲ್ಲಿ ಶೇ ೮೫ ರಷ್ಟು ಜನರು ಇನ್ನೂ ಮೊದಲ ಡೋಸ್ ಲಸಿಕೆ ಪಡೆಯಬೇಕಿದೆ ಎಂದರು. ಈ ಅಂತರವನ್ನು ಭರಿಸದಿದ್ದರೆ ಸಾಂಕ್ರಾಮಿಕದ ಈ ಸಂದಿಗ್ಧ ಸ್ಥಿತಿಯಿಂದ ಹೊರಬರಲು ಸಾಧ್ಯವಿಲ್ಲ ಎಂದು ಅವರು ಹೇಳಿದ್ದಾರೆ.
ಈ ವರ್ಷದ ಮಧ್ಯಕಾಲದವರೆಗೆ ಎಲ್ಲ ರಾಷ್ಟ್ರಗಳ ಶೇ ೭೦ ರಷ್ಟು ಜನರಿಗೆ ಲಸಿಕೆ ಒದಗಿಸುವ ನಿಟ್ಟಿನಲ್ಲಿ ಸುದೀರ್ಘ ಪಯಣ ಇನ್ನೂ ಬಾಕಿಯಿದೆ ಎಂದು ಡಬ್ಲ್ಯುಹೆಚ್‌ಒ ಮುಖ್ಯಸ್ಥರು ಅಭಿಪ್ರಾಯಪಟ್ಟಿದ್ದಾರೆ. ೯೦ ರಾಷ್ಟ್ರಗಳು ಇನ್ನೂ ಶೇ ೪೦ ರ ಹಂತವನ್ನೂ ತಲುಪಿಲ್ಲ. ಈ ರಾಷ್ಟ್ರಗಳ ಪೈಕಿ ೩೬ ದೇಶಗಳು ಶೇ ೧೦ ಕ್ಕಿಂತ ಕಡಿಮೆ ಜನರಿಗೆ ಲಸಿಕೆ ನೀಡಿಕೆಯನ್ನು ಕೈಗೊಂಡಿವೆ ಎಂದು ಅವರು ತಿಳಿಸಿದ್ದಾರೆ.

ಸುದ್ದಿ ಓದಿ