ಗಿಡಗಳನ್ನು ಮಕ್ಕಳಂತೆ ಪಾಲನೆ, ಪೋಷಣೆ ಮಾಡಿ: ಸಂಜು ಸವಸುದ್ದಿ
ಮೂಡಲಗಿ 18: ಮನೆಗೊಂದು ಮರ ಊರಿಗೊಂದು ವನ ಎನ್ನುವಂತೆ ಗಿಡಗಳನ್ನು ಮಕ್ಕಳಂತೆ ಪಾಲನೆ, ಪೋಷಣೆ, ಸಂರಕ್ಷಣೆ ಮಾಡುವ ಜವಾಬ್ದಾರಿ ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ ಎಂದು ಗೋಕಾಕ ವಲಯ ಅರಣ್ಯ ಅಧಿಕಾರಿ ಸಂಜು ಸವಸುದ್ದಿ ಹೇಳಿದರು.
ಅವರು ಮೂಡಲಗಿಯ ಮಂಜುನಾಥ ಸೈನಿಕ ತರಬೇತಿ ಕೇಂದ್ರದಲ್ಲಿ ಅರಣ್ಯ ಇಲಾಖೆ ಗೋಕಾಕ ನೆಹರು ಯುವ ಕೇಂದ್ರ ಕರ್ನಾಟಕ ರಾಜ್ಯ ಯುವ ಸಂಘಗಳ ಒಕ್ಕೂಟ ಬೆಳಗಾವಿ, ಮಧು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಂಘ ಹಾಗೂ ಮಂಜುನಾಥ ಸೈನಿಕ ಕೇಂದ್ರ ಆಶ್ರಯದಲ್ಲಿ ವನ ಮಹೋತ್ಸವ ಕಾರ್ಯಕ್ರಮದಲ್ಲಿ ಸಸಿಗೆ ನೀರು ಉಣಿಸುವ ಮೂಲಕ ಚಾಲನೆ ನೀಡಿ ಮಾತನಾಡಿ, ಮಾನವನ ಮನುಕುಲದ ಉಳಿವಿಗಾಗಿ ಸ್ವಚ್ಛ ಪರಿಸರ ಅತಿ ಅವಶ್ಯಕವಾಗಿದೆ ಎಂದು ಎಂದರು.
ಕರ್ನಾಟಕ ರಾಜ್ಯ ಯುವ ಸಂಘಗಳ ಒಕ್ಕೂಟದ ಜಿಲ್ಲಾಧ್ಯಕ್ಷ ಸಿದ್ದಣ್ಣ ದುರದುಂಡಿ ಮಾತನಾಡಿ ಬೆಳಗಾವಿ ಜಿಲ್ಲೆಯಾದ್ಯಂತ ಎಲ್ಲಾ ತಾಲೂಕಾ ಅಧ್ಯಕ್ಷರು ಮತ್ತು ಯುವಕ ಸಂಘದ ಪದಾಧಿಕಾರಿಗಳು ಸೇರಿಕೊಂಡು ಒಂದು ತಾಲೂಕಿಗೆ ನೂರರಂತೆ ಬೆಳಗಾವಿ ಜಿಲ್ಲೆಯಲ್ಲಿ ಒಂದು ಸಾವಿರ ಗಿಡಗಳನ್ನು ಬೆಳೆಸುವ ಸಂಕಲ್ಪ ಮಾಡಿದ್ದೇವೆ. ಪರಿಸರ ದಿನದಂದು ಮಾತ್ರ ಗಿಡಗನ್ನು ನೆಡುವುದಲದೆ ಜೂನ್ ತಿಂಗಳು ಪೂರ್ತಿ ಗಿಡ ಮರಗಳನ್ನು ನೆಟ್ಟು ಪೋಷಿಸಿ ಬೆಳಸುವ ಒಂದು ಅತ್ಯುತ್ತಮ ಹವ್ಯಾಸವನ್ನು ಜೀವನಪೂರ್ತಿ ಮೈಗೂಡಿಸಿಕೊಳ್ಳುವ ಸಂಕಲ್ಪ ಮಾಡೋಣ. ಗ್ರಾಮೀಣ ಭಾಗದಲ್ಲಿ ಪ್ರತಿಯೊಬ್ಬರು ಗಿಡಗಳನ್ನು ನೆಟ್ಟು ಅವುಗಳನ್ನು ವರ್ಷಪೂರ್ತಿ ನೀರು ಹಾಕಿ ಬೆಳೆಸಲು ಪ್ರತಿಯೊಬ್ಬರು ಕಂಕಣಬದ್ಧರಾಗಬೇಕು ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ ಸಂಸ್ಥೆಯ ಸಂಸ್ಥಾಪಕ ಲಕ್ಷ್ಮಣ ಅಡಿಹುಡಿ ಮಾತನಾಡಿ ಶುದ್ಧ ವಾತಾವರಣ ಉತ್ತಮ ಪರಿಸರ ನಿರ್ಮಾಣ ಮಾಡಲು ಯುವಕರು ನಿರಂತರ ಸೇವೆ ಮಾಡಬೇಕು ಎಂದರು.
ಕಾರ್ಯಕ್ರಮದಲ್ಲಿ ಮೂಡಲಗಿ ಮಧು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಂಘದ ಅಧ್ಯಕ್ಷೆ ಮಧು ಸುಣಗದ, ಸಂಕಲ್ಪ ಕ್ರೀಡಾ ಮತ್ತು ಸಮಾಜ ಸೇವಾ ಸಂಘದ ಅಧ್ಯಕ್ಷ ಸುಭಾಷ ಗೊಡ್ಯಾಗೋಳ, ಶಿಲ್ಪಾ ಗಡಾದ, ಮಂಜುನಾಥ ಕುಂಬಾರ, ಮಹಾಂತೇಶ ಕೋಟಬಾಗಿ, ಅಭಿಷೇಕ ಕಟ್ಟಿಮನಿ, ಮಹಿಳಾ ಸಂಘದ ಸದಸ್ಯರಾದ ವಿಜಯಲಕ್ಷ್ಮಿ ರೆಳೆಕರ, ಮಾಯವ್ವ ಗೊಡ್ಯಾಗೋಳ, ಶಿಲ್ಪಾ ಶಾಬಣ್ಣವರ ಮುಂತಾದವರು ಉಪಸ್ಥಿತರಿದ್ದರು.
ಪ್ರಧಾನ ಗುರುಗಳಾದ ಶಶಿದರ ಆರಾಧ್ಯ ನಿರೂಪಿಸಿದರು. ಕಾರ್ಯದರ್ಶಿ ಮಂಜುನಾಥ ರೆಳೆಕರ ವಂದಿಸಿದರು.