ಜಿಲ್ಲೆಯಲ್ಲಿ ವ್ಯಾಕ್ಸಿನ್ ಕೊರತೆಯಿಲ್ಲ : ಜಿಲ್ಲಾಧಿಕಾರಿ ಕ್ಯಾ. ರಾಜೇಂದ್ರ
ರಬಕವಿ-ಬನಹಟ್ಟಿ 25: ರಾಜ್ಯದ ವಿವಿಧ ಜಿಲ್ಲೆಗಳಿಗೆ ಹೋಲಿಸಿದರೆ ಬಾಗಲಕೋಟೆ ಜಿಲ್ಲೆಯಲ್ಲಿ ಕೋವಿಡ್ ಹಾವಳಿ ಕಡಿಮೆಯಿದೆ. ನಮ್ಮ ಜಿಲ್ಲೆಯಲ್ಲಿ ಸರಕಾರದ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುತ್ತಿರುವುದರಿಂದ ಕೋವಿಡ್ನ ದುಷ್ಪರಿಣಾಮ ಆಗದು. ಅಲ್ಲದೆ ಜಿಲ್ಲೆಯಲ್ಲಿ ವ್ಯಾಕ್ಸಿನ್ನ ಕೊರತೆಯಿಲ್ಲ. 12400 ವ್ಯಾಕ್ಸಿನ್ ಸಂಗ್ರಹದಲ್ಲಿದೆ ಎಂದು ಬಾಗಲಕೋಟೆ ಜಿಲ್ಲಾಧಿಕಾರಿ ಕ್ಯಾ. ರಾಜೇಂದ್ರ ಹೇಳಿದರು.
ರಬಕವಿ-ಬನಹಟ್ಟಿ ನಗರಗಳಿಗೆ ಅನೀರಿಕ್ಷಿತ ಭೆಟ್ಟಿ ನೀಡಿ, ಪತ್ರಿಕೆಯೊಂದಿಗೆ ಮಾತನಾಡಿದ ಜಿಲ್ಲಾಧಿಕಾರಿಯವರು, ಜನತೆಯ ಸಹಕಾರದಿಂದ ಕೋವಿಡ್ನ್ನು ಹತ್ತಿಕ್ಕಬಹುದು. ಸರಕಾರದ ಮೂಲ ನಿಯಮಗಳಾದ ಮಾಸ್ಕ್ ಅಳವಡಿಕೆ, ಸಾನಿಸೈಜರ್ ಬಳಕೆ ಹಾಗೂ ಸಾಮಾಜಿಕ ಅಂತರವನ್ನು ಜನತೆ ಕಾಯ್ದುಕೊಳ್ಳಬೇಕು. ಜಿಲ್ಲೆಯಲ್ಲಿ ಅಗತ್ಯ ಬಿದ್ದರೆ ಕೋವಿಡ್ ಕೇಂದ್ರಗಳನ್ನು ತೆರೆಯಲಾಗುವುದು. ಅದಕ್ಕೆ ಬೇಕಾದ ಎಲ್ಲ ತಯಾರಿಯನ್ನು ಜಿಲ್ಲಾಡಳಿತ ಮಾಡಿಕೊಂಡಿದೆ. ಜಿಲ್ಲೆಯಲ್ಲಿ ಕೆಲವೊಂದು ಕಡೆ ವ್ಯಾಕ್ಸಿನ್ ಹೆಚ್ಚುಕಡಿಮೆಯಾಗಿರಬಹುದು. ಆದರೆ ವ್ಯಾಕ್ಸಿನ್ಗೆ ಕೊರತೆ ಇಲ್ಲ ಎಂದು ಪತ್ರಕರ್ತರಿಗೆ ತಿಳಿಸಿದರು.
ಈ ಸಂದರ್ಭದಲ್ಲಿ ಪೌರಾಯುಕ್ತ ಶ್ರೀನಿವಾಸ ಜಾಧವ ಹಾಗೂ ಕಛೇರಿ ವ್ಯವಸ್ಥಾಪಕ ಬಿ.ಎಂ. ಡಾಂಗೆ ಇದ್ದರು.