ಅಂತರರಾಷ್ಟ್ರೀಯ

ಅಲ್ಲಾಡುತ್ತಿರುವ ಪಾಕ್ ಪ್ರಧಾನಿ ಕುರ್ಚಿ: ವಿಪಕ್ಷಗಳಿಂದ ಅವಿಶ್ವಾಸ ನಿರ್ಣಯ ಮಂಡನೆ

ಅಲ್ಲಾಡುತ್ತಿರುವ ಪಾಕ್ ಪ್ರಧಾನಿ ಕುರ್ಚಿ: ವಿಪಕ್ಷಗಳಿಂದ ಅವಿಶ್ವಾಸ ನಿರ್ಣಯ ಮಂಡನೆ

ಇಸ್ಲಾಮಾಬಾದ್: ಮಾರ್ಚ್ 28 : ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಕುರ್ಚಿ ಅಲ್ಲಾಡುತ್ತಿದ್ದು, ಅಧಿಕಾರದಿಂದ ಕೆಳಗೆ ಇಳಿಯುವುದು ಖಚಿತವಾಗಿದೆ. ಪಿಎಂ ಇಮ್ರಾನ್ ಖಾನ್ ಅವರನ್ನು ಪದಚ್ಯುತಗೊಳಿಸುವ ಅವಿಶ್ವಾಸ ನಿರ್ಣಯವನ್ನು ಪಾಕಿಸ್ತಾನದ ನ್ಯಾಷನಲ್ ಅಸೆಂಬ್ಲಿಯಲ್ಲಿ ಇಂದು ಮಂಡಿಸಲಾಯಿತು. ವಿರೋಧ ಪಕ್ಷದ ನಾಯಕ ಶೆಹಬಾಜ್ ಷರೀಫ್ ಅವರು ಮಂಡಿಸಿದ ಪ್ರಸ್ತಾವನೆಯ ಸದನದಲ್ಲಿ ಚರ್ಚೆಗೆ ಮಾತ್ರ ಬಾಕಿ ಉಳಿದುಕೊಂಡಿದೆ.

342ರ ಸದಸ್ಯ ಬಲದ ಸಂಸತ್ ನಲ್ಲಿ ವಿಪಕ್ಷಗಳು ಇಮ್ರಾನ್ ಸರ್ಕಾರವನ್ನ ಕಿತ್ತೊಗೆಯಲು 172 ಸದಸ್ಯರ ಬೆಂಬಲವನ್ನು ಪಡೆಯುವ ವಿಶ್ವಾಸದಲ್ಲಿವೆ. ಆದರೆ ಸರ್ಕಾರವು ವಿಪಕ್ಷಗಳ ಪ್ರಯತ್ನವನ್ನು ವಿಫಲಗೊಳಿಸಲು ಸದನದಲ್ಲಿ ಅಗತ್ಯವಿರುವ ಬೆಂಬಲವನ್ನು ಪಡೆಯುತ್ತದೆ ಎಂದು ಪ್ರಧಾನಮಂತ್ರಿ ಇಮ್ರಾನ್ ಖಾನ್ ಹೇಳಿಕೊಂಡಿದ್ದಾರೆ. ಆದರೆ, ಇದೆಲ್ಲವೂ ಮಾರ್ಚ್ 31ರಂದು ನಿರ್ಧಾರವಾಗಲಿದೆ. ಏಕೆಂದರೆ ಮಾರ್ಚ್ 30ರವರೆಗೆ ಪಾಕಿಸ್ತಾನ ನ್ಯಾಷನಲ್ ಅಸೆಂಬ್ಲಿಯನ್ನು ಮುಂದೂಡಲಾಗಿದೆ. ಮಾರ್ಚ್ 31ರಂದು ಇಮ್ರಾನ್ ಖಾನ್ ವಿರುದ್ಧ ಮಂಡಿಸಿದ ಅವಿಶ್ವಾಸ ನಿರ್ಣಯ ಚರ್ಚೆಗೆ ಬರುವ ಸಾಧ್ಯತೆ ಇದೆ.

ಮಾಜಿ ಕ್ರಿಕೆಟಿಗ ಇಮ್ರಾನ್ ಖಾನ್ 2018 ರಲ್ಲಿ ‘ನಯಾ ಪಾಕಿಸ್ತಾನ’ ರಚಿಸುವ ಭರವಸೆಯೊಂದಿಗೆ ಅಧಿಕಾರಕ್ಕೆ ಬಂದರು. ಆದರೆ ಅಧಿಕಾರಕ್ಕೆ ಬಂದ ಬಳಿಕ ದೇಶದ ಆರ್ಥಿಕತೆ ಮತ್ತು ವಿದೇಶಾಂಗ ನೀತಿಯನ್ನು ನಿರ್ವಹಿಸುವಲ್ಲಿ ಎಡವಿದ್ದಾರೆಂದು ವಿರೋಧ ಪಕ್ಷದವರು ಆರೋಪಿಸಿದ್ದಾರೆ.

ಪಾಕಿಸ್ತಾನ ರಾಷ್ಟ್ರೀಯ ಅಸೆಂಬ್ಲಿಯಲ್ಲಿ ಒಟ್ಟು 342 ಸದಸ್ಯರಿದ್ದಾರೆ. ಬಹುಮತಕ್ಕೆ 172 ಸದಸ್ಯರ ಅಗತ್ಯವಿದೆ. 179 ಸದಸ್ಯರ ಬೆಂಬಲದೊಂದಿಗೆ ಇಮ್ರಾನ್ ನೇತೃತ್ವದ ಪಿಟಿಐ ಸಮ್ಮಿಶ್ರ ಸರ್ಕಾರ ರಚನೆ ಮಾಡಿಕೊಂಡಿತ್ತು. ಪಿಟಿಐ 155 ಸದಸ್ಯರನ್ನು ಹೊಂದಿತ್ತು. ಅದರ ನಾಲ್ಕು ಪ್ರಮುಖ ಮಿತ್ರಪಕ್ಷಗಳಾದ ಮುತ್ತಹಿದಾ ಕ್ವಾಮಿ ಮೂವ್‌ಮೆಂಟ್-ಪಾಕಿಸ್ತಾನ (MQM-P), ಪಾಕಿಸ್ತಾನ್ ಮುಸ್ಲಿಂ ಲೀಗ್-ಖೈದಾ (PML-Q), ಬಲೂಚಿಸ್ತಾನ್ ಅವಾಮಿ ಪಾರ್ಟಿ (BAP) ಮತ್ತು ಗ್ರ್ಯಾಂಡ್ ಡೆಮಾಕ್ರಟಿಕ್ ಅಲಯನ್ಸ್ (GDA) ಕ್ರಮವಾಗಿ ಏಳು, ಐದು, ಐದು ಮತ್ತು ಮೂರು ಸದಸ್ಯರನ್ನು ಮೈತ್ರಿ ಒಳಗೊಂಡಿತ್ತು. ಆದರೆ, ಬದಲಾದ ಪಾಕ್ ನ ರಾಜಕೀಯ ಪರಿಸ್ಥಿತಿಯಲ್ಲಿ ಸುಮಾರು 20ಕ್ಕೂ ಹೆಚ್ಚು ಸದಸ್ಯರು ಇಮ್ರಾನ್ ಖಾನ್ ನೇತೃತ್ವದ ಸರಕಾರಕ್ಕೆ ಗುಡ್ ಬೈ ಹೇಳಿದ್ದಾರೆ. 

ಸುದ್ದಿ ಓದಿ