3 ದಿನಗಳಲ್ಲಿ ಹೊಸ ಸರ್ಕಾರ, ಮಹಿಳೆಯರಿಗೂ ಪ್ರಾತಿನಿಧ್ಯ; ತಾಲಿಬಾನ್
ದೋಹಾ, ಸೆ 1 : ಅಫ್ಘಾನಿಸ್ತಾನದಲ್ಲಿ ಮೂರು ದಿನಗಳಲ್ಲಿ ಸರ್ಕಾರ ರಚಿಸಲಾಗುವುದು ಎಂದು ಕತಾರ್‌ನಲ್ಲಿರುವ ತಾಲಿಬಾನ್‌ನ ರಾಜಕೀಯ ಕಚೇರಿಯ ಉಪಾಧ್ಯಕ್ಷ ಶೇರ್ ಮೊಹಮ್ಮದ್ ಅಬ್ಬಾಸ್ ಸ್ಟಾನಿಕ್‌ಜಾಯ್ ಹೇಳಿದ್ದಾರೆ.
ಬಿಬಿಸಿಯ ಪಷ್ತೂ ರೇಡಿಯೋಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಅವರು, "ಹೊಸದಾಗಿ ರಚನೆಯಾಗಲಿರುವ ಸರ್ಕಾರದಲ್ಲಿ, ಕಳೆದ 20 ವರ್ಷಗಳ ಕಾಲ ಆಡಳಿತ ನಡೆಸಿದ್ದವರು ಯಾರೂ ಸಹ ಇರುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಇಸ್ಲಾಮಿಕ್ ಎಮಿರೇಟ್ಸ್ ಆಫ್ ಅಫ್ಘಾನಿಸ್ತಾನ್ ಸರ್ಕಾರ ರಚನೆಯಾಗುವುದರಲ್ಲಿ ಯಾವುದೇ ಸಂದೇಹವಿಲ್ಲ ಎಂದು ಹೇಳಿದ ಸ್ಟಾನಿಕ್‌ಜಾಯ್, ದೇಶದಲ್ಲಿ ಎಲ್ಲಾ ಪ್ರಾಂತ್ಯಗಳ ಪ್ರತಿನಿಧಿಗಳು ಸರ್ಕಾರದಲ್ಲಿರಲಿದ್ದಾರೆ. ಕಳೆದ ಇಪ್ಪತ್ತು ವರ್ಷಗಳಲ್ಲಿ ಸೇನಾ ವ್ಯವಸ್ಥೆಯಲ್ಲಿ ಯಾವುದೇ ರೂಪದಲ್ಲಿ ಕಾರ್ಯನಿರ್ವಹಿಸಿದವರಿಗೆ ಯಾವುದೇ ಸ್ಥಾನ ಮಾನ ಇಲ್ಲ ಎಂದು ಹೇಳಿದರು.
ಇದಕ್ಕೂ ಮುನ್ನ, ತಾಲಿಬಾನ್ ವಕ್ತಾರ ಜಬಿಹುಲ್ಲಾ ಮುಜಾಹಿದ್, ಸರ್ಕಾರ ರಚನೆ ಸಂಬಂಧ ಕಂದಹಾರ್ ನಲ್ಲಿ ತಮ್ಮ ನಾಯಕ ಮುಲ್ಲಾ ಹಬಿಬುಲ್ಲಾ ಅಖುಂಡ ಜಾದಾ ನೇತೃತ್ವದಲ್ಲಿ ನಡೆದ ಮೂರು ದಿನಗಳ ಸಭೆ ಕೊನೆಗೊಂಡಿದೆ ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಸರ್ಕಾರದಲ್ಲಿ ಮಹಿಳೆಯರು:
ನೂತನ ತಾಲಿಬಾನ್ ಸರ್ಕಾರದಲ್ಲೂ ಮಹಿಳೆಯರೂ ಇರಲಿದ್ದಾರೆ ಎಂದು ಸಂದರ್ಶನವೊಂದರಲ್ಲಿ ಶೇರ್ ಮೊಹಮ್ಮದ್ ಅಬ್ಬಾಸ್ ಸ್ಟಾನಿಕ್‌ಜಾಯ್ ಅವರು ಹೇಳಿದ್ದರು, ಆದರೆ "ಅವರನ್ನು ಸಚಿವ ಸ್ಥಾನಮಾನ ಅಥವಾ ಪ್ರಮುಖ ಹುದ್ದೆಗಳಿಗೆ ತೆಗೆದುಕೊಳ್ಳಬೇಕೇ... ಬೇಡವೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ" ಎಂದರು
ಸರ್ಕಾರದಲ್ಲಿ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಇರಲಿದ್ದಾರೆ ಎಂಬುದರಲ್ಲಿ ಯಾವುದೇ ಸಂದೇಹವಿಲ್ಲ ಎಂದು ಹೇಳಿರುವ ಅವರು, ಆದರೆ, ಮಹಿಳೆಯರು ಮಹತ್ವದ ಸ್ಥಾನದಲ್ಲಿ ಇರಲಿದ್ದಾರೆಯೇ ಅಥವಾ ಇಲ್ಲವೇ ಎಂಬುದನ್ನು ಈಗ ಹೇಳಲು ಸಾಧ್ಯವಿಲ್ಲ. ಸರ್ಕಾರದಲ್ಲಿ ಮಹಿಳೆಯರಿರುವುದು ನಮಗೆ ಸಮಸ್ಯೆಯಲ್ಲ ಅವರು ಅಧಿಕಾರ ವ್ಯವಸ್ಥೆಯಲ್ಲೂ ಕೆಲಸ ಮಾಡಲಿದ್ದಾರೆ ಎಂದು ಹೇಳಿದ್ದಾರೆ.