ಚಿಕ್ಕೋಡಿ

ಹೊಸ ತಂತ್ರಜ್ಞಾನ ಕಲಿಕೆಯೊಂದಿಗೆ ಉತ್ತಮ ಸಂಸ್ಕಾರವೂ ಅಗತ್ಯ: ಸದಾಶಿವ ತಾರದಾಳೆ

ಹೊಸ ತಂತ್ರಜ್ಞಾನ ಕಲಿಕೆಯೊಂದಿಗೆ ಉತ್ತಮ ಸಂಸ್ಕಾರವೂ ಅಗತ್ಯ: ಸದಾಶಿವ ತಾರದಾಳೆ

ಚಿಕ್ಕೋಡಿ, ಆ. 19: ಕಂಪ್ಯೂಟರ್, ಇಂಟರ್‌ನೆಟ್ ಹಾಗೂ ಕೃತಕ ಬುದ್ಧಿಮತ್ತೆ (ಎಐ) ಸೇರಿದಂತೆ ಹೊಸ ತಂತ್ರಜ್ಞಾನಗಳು ಇಂದಿನ ಯುವಜನರ ಭವಿಷ್ಯಕ್ಕೆ ಭದ್ರ ಅಡಿಪಾಯವಾಗಿವೆ. ತಂತ್ರಜ್ಞಾನ ಕ್ಷೇತ್ರದ ಬೆಳವಣಿಗೆಯಿಂದ ಉದ್ಯಮ, ಫಿನ್‌ಟೆಕ್ ಸಂಸ್ಥೆಗಳು ಹಾಗೂ ಕೃಷಿ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಹೆಚ್ಚಿನ ಉದ್ಯೋಗಾವಕಾಶಗಳು ಸೃಷ್ಟಿಯಾಗುತ್ತಿವೆ ಎಂದು ಚಿಕ್ಕೋಡಿ ರೋಟರಿ ಕ್ಲಬ್ ಅಧ್ಯಕ್ಷ ಸದಾಶಿವ ತಾರದಾಳೆ ಹೇಳಿದರು.

ನಗರದ ಟೆಕ್‌ಏಜ್ ಲರ್ನಿಂಗ್ಸ್ ಸಂಸ್ಥೆಯಲ್ಲಿ ನಡೆದ ‘ಜೀವನ ಉತ್ಕರ್ಷ’ ಶಿಷ್ಯವೇತನ ಯೋಜನೆಯ ಅರ್ಜಿ ಬಿಡುಗಡೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಪ್ರಾಚಾರ್ಯ ಎಸ್.ಎಸ್. ಮೆಡಗುಡ್ ಮಾತನಾಡಿ, ಯುವಕರು ಉತ್ತಮ ಶಿಕ್ಷಣ ಪಡೆಯುವುದರ ಜೊತೆಗೆ ದೇಶದ ಯಶಸ್ವಿ ಪ್ರಜೆಗಳಾಗಲು ಉತ್ತಮ ಸಂಸ್ಕಾರವನ್ನು ಬೆಳೆಸಿಕೊಳ್ಳುವುದು ಅತ್ಯಂತ ಮುಖ್ಯವಾಗಿದೆ. ಕಳೆದ 30 ವರ್ಷಗಳಿಂದ ಆಪ್ಟೆಕ್–ಟೆಕ್‌ಏಜ್ ಸಂಸ್ಥೆಯು ಯುವಜನರ ಏಳಿಗೆಗಾಗಿ ಮಾಡುತ್ತಿರುವ ಕಾರ್ಯ ಶ್ಲಾಘನೀಯವಾಗಿದೆ ಎಂದರು.

ಟೆಕ್‌ಏಜ್ ಲರ್ನಿಂಗ್ಸ್ ಸಂಸ್ಥೆಯ ಮುಖ್ಯಸ್ಥ ಉದಯ ಪಾಟೀಲ ಮಾತನಾಡಿ, 1947ರಲ್ಲಿ ಬ್ರಿಟಿಷರ ಆಳ್ವಿಕೆಯಿಂದ ಭಾರತ ಸ್ವಾತಂತ್ರ್ಯ ಪಡೆದಂತೆ, ಇಂದಿನ ಯುವಜನರು ನಿರುದ್ಯೋಗದಿಂದ ಸ್ವಾತಂತ್ರ್ಯ ಪಡೆಯಬೇಕಾದರೆ ಕೌಶಲ್ಯಾಧಾರಿತ ಶಿಕ್ಷಣ ಅತ್ಯವಶ್ಯಕವಾಗಿದೆ. ಇದೇ ಉದ್ದೇಶದಿಂದ ಜಾರಿಗೆ ತಂದಿರುವ ‘ಜೀವನ ಉತ್ಕರ್ಷ’ ಶಿಷ್ಯವೇತನ ಯೋಜನೆಯ ಸದುಪಯೋಗವನ್ನು ಉತ್ತಮ ಉದ್ಯೋಗದ ಕನಸು ಕಾಣುತ್ತಿರುವ ಚಿಕ್ಕೋಡಿ ಹಾಗೂ ಸುತ್ತಮುತ್ತಲಿನ ಯುವಜನರು ಪಡೆದುಕೊಳ್ಳಬೇಕು ಎಂದು ಕರೆ ನೀಡಿದರು.

ಕಾರ್ಯಕ್ರಮದಲ್ಲಿ ಸಂಸ್ಥೆಯಲ್ಲಿ ತರಬೇತಿ ಪಡೆದು ವಿವಿಧ ಕ್ಷೇತ್ರಗಳಲ್ಲಿ ಉತ್ತಮ ಉದ್ಯೋಗದಲ್ಲಿರುವ ಯಶಸ್ವಿ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಚಿಕ್ಕೋಡಿ ಪರಿಸರದ ಅನೇಕ ಗಣ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಕು. ಸೀಮಾ ಜಯಪ್ಪಗೋಳ ವಂದನಾರ್ಪಣೆ ಸಲ್ಲಿಸಿದರು. ಕು. ಚೈತಾಲಿ ಪಾಟೀಲ ಕಾರ್ಯಕ್ರಮ ನಿರೂಪಿಸಿದರು.

ಸುದ್ದಿ ಓದಿ