ಉಕ್ರೇನ್- ರಷ್ಯಾ ನಡುವಿನ ಸಂಧಾನ ಯಶಸ್ವಿ
ಇಸ್ತಾನ್ ಬುಲ್: ಮಾರ್ಚ್ 29 : ರಷ್ಯಾ ಮತ್ತು ಉಕ್ರೇನ್ ನಡುವಿನ ಸಂಧಾನ ಯಶಸ್ವಿಯಾಗಿದ್ದು ಉಭಯ ದೇಶಗಳ ಅಧ್ಯಕ್ಷರು ಶೀಘ್ರದಲ್ಲೇ ಮಾತುಕತೆಗೆ ಮುಂದಾಗಲಿದ್ದಾರೆ.
ಟರ್ಕಿಯ ಇಸ್ತಾನ್ ಬುಲ್ ನಲ್ಲಿ ನಡೆದ ಉಭಯ ರಾಷ್ಟ್ರಗಳ ನಾಯಕರ ಮಾತುಕತೆ ಫಲಪ್ರದವಾಗಿದ್ದು ರಷ್ಯಾದೊಂದಿಗಿನ ಸಂಘರ್ಷವನ್ನು ಪರಿಹರಿಸಲು ಟರ್ಕಿಯಲ್ಲಿ ಮಂಗಳವಾರ ನಡೆದ ಮಾತುಕತೆಯಲ್ಲಿ ಸಾಕಷ್ಟು ಪ್ರಗತಿಯನ್ನು ಸಾಧಿಸಲಾಗಿದೆ. ಇಂದಿನ ಸಭೆಯ ಫಲಿತಾಂಶಗಳು ಉಭಯ ದೇಶಗಳ ಅಧ್ಯಕ್ಷರ ಸಭೆಗೆ ಮುನ್ನುಡಿ ಬರೆದಿವೆ ಎಂದು ಉಕ್ರೇನಿಯನ್ ಸಮಾಲೋಚಕ ಡೇವಿಡ್ ಅರಾಖಮಿಯಾ ಹೇಳಿದರು.
ಉಕ್ರೇನ್ ಮೇಲೆ ರಷ್ಯಾ ದಾಳಿ ಮಾಡಿದ ತಿಂಗಳ ಬಳಿಕ ಟರ್ಕಿಯ ಇಸ್ತಾನ್‌ಬುಲ್‌ನಲ್ಲಿ ನಡೆದ ಶಾಂತಿ ಮಾತುಕತೆಯಲ್ಲಿ ಉಕ್ರೇನಿಯನ್ ಪ್ರತಿನಿಧಿಗಳೊಂದಿಗಿನ ಅರ್ಥಪೂರ್ಣ ಪ್ರಗತಿಯನ್ನು ರಷ್ಯಾದ ಸಮಾಲೋಚಕರು ಸ್ವಾಗತಿಸಿದರು.ಯುದ್ಧ ಪೀಡಿತ ಉಕ್ರೇನ್ ನೆಲದಲ್ಲಿ ಮಾನವೀಯ ಪರಿಸ್ಥಿತಿ ಮತ್ತು ರಷ್ಯಾ ಒತ್ತಾಯ ಮಾಡುತ್ತಿರುವ ವಿಷಯಗಳಲ್ಲಿ ಉಕ್ರೇನ್ ತಟಸ್ಥ ನೀತಿ ತಾಳುವ ಬಗ್ಗೆ ಇಂದಿನ ಸಭೆ ಕೇಂದ್ರೀಕೃತವಾಗಿತ್ತು. ಉಕ್ರೇನ್ ನ್ಯಾಟೋ ಸದಸ್ಯತ್ವ ಪಡೆಯುವ ಉದ್ದೇಶದಿಂದ ಹಿಂದೆ ಸರಿದಿದೆ. ಶೀಘ್ರದಲ್ಲೇ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಮತ್ತು ಉಕ್ರೇನ್ ಅಧ್ಯಕ್ಷ ಝೆಲೆನ್ಸ್ಕಿ ಮಾತುಕತೆ ನಡೆಸೋ ಸಾಧ್ಯತೆಯಿದೆ.