ಯುವಕರನ್ನು ರಾಷ್ಟ್ರ ನಿರ್ಮಾಣದಲ್ಲಿ ಸಕ್ರಿಯವಾಗಿ ತೊಡಗಿಸಲು ಮೈ ಭಾರತ್ ಕಾರ್ಯಕ್ರಮ: ಶರಣ್ಯ ಬಿ.
ಲೋಕದರ್ಶನ ವರದಿ
ಯುವಕರನ್ನು ರಾಷ್ಟ್ರ ನಿರ್ಮಾಣದಲ್ಲಿ ಸಕ್ರಿಯವಾಗಿ ತೊಡಗಿಸಲು ಮೈ ಭಾರತ್ ಕಾರ್ಯಕ್ರಮ: ಶರಣ್ಯ ಬಿ.
ಹಾವೇರಿ:ಸೆ.11 : ಯುವಕರಲ್ಲಿ ನಾಯಕತ್ವ ಗುಣ, ಸ್ವಯಂಸೇವಾ ಮನೋಭಾವ, ಕೌಶಲ್ಯ, ಸೃಜನಶೀಲತೆ ಹಾಗೂ ಸಾಮಾಜಿಕ ಹೊಣೆಗಾರಿಕೆಯನ್ನು ಬೆಳೆಸುವುದರ ಜೊತೆಗೆ ದೇಶದ ಅಭಿವೃದ್ಧಿಯಲ್ಲಿ ಅವರನ್ನು ಸಕ್ರಿಯ ಪಾಲುದಾರರನ್ನಾಗಿ ಮಾಡುವುದು ಮೈ ಭಾರತ್ನ ಪ್ರಮುಖ ಉದ್ದೇಶವಾಗಿದೆ ಎಂದು ಜಿಲ್ಲಾ ಮೈ ಭಾರತ್ ಯುವ ಅಧಿಕಾರಿ ಶರಣ್ಯ ಬಿ. ಹೇಳಿದರು.
ನಗರದ ಜಿಲ್ಲಾ ಪ್ರವಾಸ ಮಂದಿರದಲ್ಲಿ ಶುಕ್ರವಾರ ಮಾಧ್ಯಮಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಕೇಂದ್ರ ಸರ್ಕಾರವು ಪ್ರತಿವರ್ಷ ಜನವರಿ 12ರಂದು ಸ್ವಾಮಿ ವಿವೇಕಾನಂದರ ಜನ್ಮದಿನದ ಅಂಗವಾಗಿ ನವದೆಹಲಿಯಲ್ಲಿ ‘ವಿಕಸಿತ ಭಾರತ ಯಂಗ್ ಲೀಡರ್ಸ್ ಡೈಲಾಗ್ ಕ್ವಿಜ್’ ಕಾರ್ಯಕ್ರಮ ಆಯೋಜಿಸುತ್ತಿದ್ದು, ಜಿಲ್ಲೆಯ ಯುವಜನರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ಕರೆ ನೀಡಿದರು.
ಯುವಜನರನ್ನು ರಾಷ್ಟ್ರ ನಿರ್ಮಾಣದ ಪ್ರಕ್ರಿಯೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳುವ ಉದ್ದೇಶದಿಂದ ಕೇಂದ್ರ ಯುವ ವ್ಯವಹಾರ ಮತ್ತು ಕ್ರೀಡಾ ಸಚಿವಾಲಯದ ಅಧೀನದಲ್ಲಿ ಕಾರ್ಯನಿರ್ವಹಿಸುತ್ತಿರುವ ಮೈ ಭಾರತ್ ವತಿಯಿಂದ ‘ವಿಕಸಿತ ಭಾರತ ಯಂಗ್ ಲೀಡರ್ಸ್ ಡೈಲಾಗ್ ಕ್ವಿಜ್’ ಆಯೋಜಿಸಲಾಗಿದೆ. ಸೆಪ್ಟೆಂಬರ್ 17ರಿಂದ 30ರವರೆಗೆ ಆನ್ಲೈನ್ನಲ್ಲಿ ನಡೆಯುವ ಕ್ವಿಜ್ನಲ್ಲಿ 15ರಿಂದ 29 ವರ್ಷದೊಳಗಿನ ಎಲ್ಲಾ ಯುವಕ-ಯುವತಿಯರು ಭಾಗವಹಿಸಬಹುದಾಗಿದೆ.
ಕ್ವಿಜ್ನಲ್ಲಿ ಯಶಸ್ವಿಯಾಗುವ ಯುವಜನರಿಗೆ ಮುಂದಿನ ಹಂತಗಳಲ್ಲಿ ಪ್ರಬಂಧ ಸ್ಪರ್ಧೆ, ಜಿಲ್ಲಾ ಮಟ್ಟದ ಚಾಂಪಿಯನ್ಶಿಪ್ ಹಾಗೂ ಸಾಂಸ್ಕೃತಿಕ ಸ್ಪರ್ಧೆ ಸೇರಿದಂತೆ ವಿವಿಧ ಹಂತಗಳಲ್ಲಿ ಭಾಗವಹಿಸುವ ಅವಕಾಶ ದೊರೆಯಲಿದೆ. ವಿಜೇತರು ರಾಷ್ಟ್ರೀಯ ಮಟ್ಟದ ಗಿಃಙಐಆ ಕಾರ್ಯಕ್ರಮದಲ್ಲಿ ಭಾಗವಹಿಸುವ ಅವಕಾಶ ಪಡೆಯಲಿದ್ದಾರೆ. ಕ್ವಿಜ್ ಸ್ಪರ್ಧೆಯಲ್ಲಿ ಭಾಗವಹಿಸಲು ಸೆಪ್ಟೆಂಬರ್ 30 ಕೊನೆಯ ದಿನವಾಗಿದೆ ಎಂದು ಅವರು ತಿಳಿಸಿದರು.
ಯುವಕರ ಪ್ರತಿಭೆ ಮತ್ತು ಸೃಜನಶೀಲತೆಯನ್ನು ಗುರುತಿಸಲು ‘ಡಿಸೈನ್ ಫಾರ್ ಭಾರತ್’, ‘ಹ್ಯಾಕ್ ಫಾರ್ ಸೋಶಿಯಲ್ ಕಾಸ್’ ಸೇರಿದಂತೆ ಹಲವು ಕಾರ್ಯಕ್ರಮಗಳನ್ನು ಮೈ ಭಾರತ್ ಆಯೋಜಿಸುತ್ತಿದೆ. ಕಲೆ, ಸಾಹಿತ್ಯ, ವಿಜ್ಞಾನ, ನಾವೀನ್ಯತೆ, ತಂತ್ರಜ್ಞಾನ ಹಾಗೂ ಸಾಮಾಜಿಕ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಕ್ಷೇತ್ರಗಳಲ್ಲಿ ಯುವಕರು ತಮ್ಮ ಸಾಮರ್ಥ್ಯ ಪ್ರದರ್ಶಿಸಬಹುದಾಗಿದೆ ಎಂದರು.
ಕ್ವಿಜ್ನಲ್ಲಿ ಭಾಗವಹಿಸಲು ಯುವಜನರು ಮೈ ಭಾರತ್ ವೆಬ್ಸೈಟ್ಗೆ ಭೇಟಿ ನೀಡಿ ನೋಂದಾಯಿಸಿಕೊಳ್ಳಬಹುದು. ಜಿಲ್ಲೆಯ ಎಲ್ಲಾ ಯುವಕ-ಯುವತಿಯರು ಹೆಚ್ಚಿನ ಸಂಖ್ಯೆಯಲ್ಲಿ ನೋಂದಾಯಿಸಿಕೊಂಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು ಎಂದು ಜಿಲ್ಲಾ ಮೈ ಭಾರತ್ ಯುವ ಅಧಿಕಾರಿ ಶರಣ್ಯ ಬಿ. ಮನವಿ ಮಾಡಿದರು.