ನ್ಯೂಯಾರ್ಕ್ ತಲುಪಿದ ಮೋದಿ, ಸಂಜೆ ವಿಶ್ವಸಂಸ್ಥೆ ಯಲ್ಲಿ ಭಾಷಣ
ನ್ಯೂಯಾರ್ಕ್, ಸೆ 25 - ಅಮೆರಿಕಾ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಬಿಡುವಿಲ್ಲದ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಂಡಿದ್ದಾರೆ. ನಿನ್ನೆ ಆ ದೇಶದ ಅಧ್ಯಕ್ಷ ಜೋ ಬೈಡನ್, ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದರು. ಅವರೊಂದಿಗೆ ದ್ವಿಪಕ್ಷೀಯ ಅಂಶಗಳೊಂದಿಗೆ ಅಂತರಾಷ್ಟ್ರೀಯ ಬೆಳವಣಿಗೆಗಳ ಕುರಿತು ಚರ್ಚಿಸಿದ್ದರು. ಇದಕ್ಕೂ ಮುನ್ನ ಪ್ರಧಾನಿ ಮೋದಿ ಪ್ರಮುಖ ಕಂಪನಿಗಳ ಸಿಇಓಗಳನ್ನು ಭೇಟಿ ಮಾಡಿ "ಭಾರತದಲ್ಲಿ ಹೂಡಿಕೆ ಮಾಡುವಂತೆ" ಆಹ್ವಾನಿಸಿದ್ದರು.
ಈಗ ವಿಶ್ವಸಂಸ್ಥೆಯ ಮಹಾ ಅಧಿವೇಶನ ಉದ್ದೇಶಿಸಿ ಮಾತನಾಡಲು ಪ್ರಧಾನಿ ಮೋದಿ ನ್ಯೂಯಾರ್ಕ್ ತಲುಪಿದ್ದಾರೆ. ನ್ಯೂಯಾರ್ಕ್ ಗೆ ಆಗಮಿಸಿದ ಮೋದಿ ಅವರಿಗೆ ಅನಿವಾಸಿ ಭಾರತೀಯರು ಆತ್ಮೀಯ ಸ್ವಾಗತ ನೀಡಿದರು. ಈ ಸಂದರ್ಭದಲ್ಲಿ ವಂದೇ ಮಾತರಂ ಎಂಬ ಘೋಷಣೆಗಳು ಮೊಳಗಿದವು. ವಿಶ್ವಸಂಸ್ಥೆಯ 76 ನೇ ಸಾಮಾನ್ಯ ಸಭೆ ಇಂದು ನಡೆಯಲಿದೆ. ಭಾರತೀಯ ಕಾಲಮಾನ ಸಂಜೆ 6 ಗಂಟೆಗೆ ಪ್ರಧಾನಿ ವಿಶ್ವಸಂಸ್ಥೆ ಉದ್ದೇಶಿಸಿ ಮಾತನಾಡಲಿದ್ದಾರೆ. 2014 ರಲ್ಲಿ ಪ್ರಧಾನಿಯಾದ ನಂತರ ನರೇಂದ್ರ ಮೋದಿ ಅವರ ಅಮೆರಿಕಾದ ಏಳನೇ ಭೇಟಿ ಇದಾಗಿದೆ. ಅಮೆರಿಕಾದಲ್ಲಿರುವ NRI ಗಳಲ್ಲಿ ಪ್ರಧಾನ ಮಂತ್ರಿ ಮೋದಿ ಅವರ ಬಗ್ಗೆ ಭಾರಿ ಅಭಿಮಾನಹೊಂದಿದ್ದಾರೆ.