ಭಾರತ ವಿರುದ್ದ ಅಪ ಪ್ರಚಾರ ನಡೆಸಲು ವಿಶ್ವಸಂಸ್ಥೆ ವೇದಿಕೆಗಳ ದುರುಪಯೋಗ
ನ್ಯೂಯಾರ್ಕ್, ನ 17: ಭಾರತದ ವಿರುದ್ಧ ಅಪ ಪ್ರಚಾರ ನಡೆಸಲು ವಿಶ್ವಸಂಸ್ಥೆಯ ವೇದಿಕೆಗಳನ್ನು ಪಾಕಿಸ್ತಾನ ದುರುಪಯೋಗಪಡಿಸಿಕೊಳ್ಳುತ್ತಿದೆ ಎಂದು ವಿಶ್ವಸಂಸ್ಥೆ ಭಾರತದ ಕಾಯಂ ನಿಯೋಗದ ಕಾನೂನು ಸಲಹೆಗಾರ್ತಿ ಡಾ.ಕಾಜಲ್ ಭಟ್ ಆಕ್ರೋಶ ವ್ಯಕ್ತಪಡಿಸಿದ್ದು , ಅಕ್ರಮವಾಗಿ ವಶಕ್ಕೆ ಪಡೆದಿರುವ ಜಮ್ಮು ಕಾಶ್ಮೀರದ ಎಲ್ಲ ಪ್ರದೇಶಗಳನ್ನು ಪಾಕಿಸ್ತಾನ ತೆರವುಗೊಳಿಸಬೇಕು ಎಂದು ಆಗ್ರಹಿಸಿದ್ದಾರೆ.
ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಮಾತನಾಡಿದ ಡಾ.ಕಾಜಲ್ ಭಟ್ ಅವರು ಜಮ್ಮು ಮತ್ತು ಕಾಶ್ಮೀರ ಮತ್ತು ಲಡಾಖ್ ಕೇಂದ್ರಾಡಳಿತ ಪ್ರದೇಶಗಳು ಸಂಪೂರ್ಣವಾಗಿ ಭಾರತಕ್ಕೆ ಸೇರಿವೆ. ಪಾಕಿಸ್ತಾನ ಕೆಲವು ಪ್ರದೇಶಗಳನ್ನು ಆಕ್ರಮಿಸಿಕೊಂಡಿದೆ. ಈ ಪ್ರದೇಶಗಳನ್ನು ತಕ್ಷಣವೇ ಖಾಲಿ ಮಾಡಬೇಕು ಎಂದು ಒತ್ತಾಯಿಸಿದರು.
ಪಾಕಿಸ್ತಾನ ಭಯೋತ್ಪಾದಕರಿಗೆ ಆಶ್ರಯ , ಸಹಾಯ ಮಾಡುವ ದೇಶವೆಂದು ವಿಶ್ವಸಂಸ್ಥೆಯ ಸದಸ್ಯ ರಾಷ್ಟ್ರಗಳಿಗೆ ಗೊತ್ತಿದೆ. ಭಯೋತ್ಪಾದಕರಿಗೆ ತರಬೇತಿ ನೀಡುವ, ಹಣಕಾಸು ಒದಗಿಸುವ ಹಾಗೂ ಶಸ್ತ್ರಾಸ್ತ್ರ ನೀಡುವ ದೇಶವಾಗಿ ಪಾಕಿಸ್ತಾನ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರ್ತಿಸಲ್ಪಟ್ಟಿದೆ. ವಿಶ್ವಸಂಸ್ಥೆಯಿಂದಲೇ ನಿಷೇಧಕ್ಕೆ ಒಳಗಾದ ಸಂಘಟನೆಗಳ ಭಯೋತ್ಪಾದಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಕಿಸ್ತಾನದಲ್ಲಿದ್ದಾರೆ ಎಂದು ಕಾಜಲ್ ಭಟ್ ಒತ್ತಿ ಹೇಳಿದರು.