ಅಂತರರಾಷ್ಟ್ರೀಯ

ಗಣಿಗಾರರ ಘರ್ಷಣೆ: ಪೆರುವಿನಲ್ಲಿ 14 ಮಂದಿ ದುರ್ಮರಣ

ಗಣಿಗಾರರ ಘರ್ಷಣೆ: ಪೆರುವಿನಲ್ಲಿ 14 ಮಂದಿ ದುರ್ಮರಣ

ಲಿಮಾ: ಜೂನ್ 09: ದಕ್ಷಿಣ ಪೆರುವಿನ ಅರೆಕ್ವಿಪಾ ಇಲಾಖೆಯ ಚಿನ್ನದ ನಿಕ್ಷೇಪದಲ್ಲಿ ಕೆಲಸ ಮಾಡುತ್ತಿದ್ದ ಗುಂಪುಗಳ ಮಧ್ಯೆ ನಡೆದ ಘರ್ಷಣೆಯಲ್ಲಿ ಕನಿಷ್ಠ 14 ಮಂದಿ ಸಾವನ್ನಪ್ಪಿದ್ದಾರೆ ಎಂದು ಸ್ಥಳೀಯ ಅಧಿಕಾರಿಗಳು ತಿಳಿಸಿದ್ದಾರೆ.

ಗುಂಡೇಟಿನ ಗಾಯಗಳೊಂದಿಗೆ 7 ಶವಗಳು ಶನಿವಾರ ಪತ್ತೆಯಾಗಿವೆ. ಅಧಿಕಾರಿಗಳು ಮುಂದುವರಿಸಿದ ಶೋಧ ಕಾರ್ಯದಲ್ಲಿ ಮಂಗಳವಾರ ಮತ್ತೆ ಏಳು ದೇಹಗಳು ಪತ್ತೆಯಾಗಿವೆ. ಆದರೆ ಹಲವರು ನಾಪತ್ತೆಯಾಗಿರುವುದರಿಂದ ಹೆಚ್ಚಿನ ಮೃತದೇಹಗಳು ಪತ್ತೆಯಾಗುವ ಸಾಧ್ಯತೆ ಇದೆ ಎಂದು ಅರೆಕ್ವಿಪಾ ಪ್ರಾಸಿಕ್ಯೂಟರ್ ಮರಿಯಾ ಡೆಲ್ ರೊಸಾರಿಯೊ ಲೊಜಾಡಾ ಪೆರುವಿಯನ್ ಸುದ್ದಿ ನೆಟ್‌ವರ್ಕ್ ರೇಡಿಯೊ ಪ್ರೋಗ್ರಾಮಾಸ್ ಡೆಲ್ ಪೆರುಗೆ ಬುಧವಾರ ತಿಳಿಸಿದರು.

ಸ್ಥಳೀಯ ಪತ್ರಿಕೆ ಎಲ್ ಕೊಮರ್ಸಿಯೊ ಪ್ರಕಾರ, ಕ್ಯಾರವೆಲಿ ಪ್ರಾಂತ್ಯದ ಅಟಿಕೊ ಜಿಲ್ಲೆಯ ಹುವಾನಾಕ್ವಿಟಾ ಎಂಬ ವಿವಾದಿತ ಪ್ರದೇಶದಲ್ಲಿ ಜೂನ್ 2 ರಂದು ಹಿಂಸಾಚಾರ ಭುಗಿಲೆದ್ದಿತು. ಘಟನೆಗೆ ಸಂಬಂಧಿಸಿದಂತೆ ಅಧಿಕಾರಿಗಳು 31 ಜನರನ್ನು ಬಂಧಿಸಲಾಗಿದ್ದು, ಅವರಿಂದ ಹೆಚ್ಚಿನ ವಿಚಾರಣೆ ನಡೆಸಲಾಗುತ್ತಿದೆ ಎಂದು ಲೊಜಾಡಾ ಹೇಳಿದರು. ಆರೋಪಿಗಳನ್ನು ಗುರುತಿಸಲು ಪ್ರಾಸಿಕ್ಯೂಟರ್ ಕಚೇರಿಯು ಘಟನೆಯ ವೀಡಿಯೊಗಳು ಮತ್ತು ಆಡಿಯೊಗಳನ್ನು ಪರಿಶೀಲನೆ ಮಾಡುತ್ತಿದೆ.

ಅರೆಕ್ವಿಪಾ ಪೊಲೀಸ್ ಮುಖ್ಯಸ್ಥ ಲೂಯಿಸ್ ಪಚೆಕೊ, ಸೌತ್ ಪ್ಯಾನ್-ಅಮೆರಿಕನ್ ಹೆದ್ದಾರಿಯಲ್ಲಿ ಸಂಚಾರವನ್ನು ನಿರ್ಬಂಧಿಸಲಾಗಿದೆ ಎಂದು ಹೇಳಿದರು, ಈ ಹಿಂಸಾಚಾರದ ಬಳಿಕ, ಘಟನೆಗೆ ಕಾರಣರಾದರವನ್ನು ಬಂಧಿಸಬೇಕೆಂದು ಸ್ಥಳೀಯ ನಿವಾಸಿಗಳು ಮಂಗಳವಾರ ರಸ್ತೆ ತಡೆ ನಡೆಸಿದ್ದರು.

ಸುದ್ದಿ ಓದಿ