ಮೆಕ್ಸಿಕೊ ಪ್ರವಾಹ: ಆಮ್ಲಜನಕ ಪೂರೈಕೆಗೆ ಅಡ್ಡಿ, 17 ಕೋವಿಡ್ ಸೋಂಕಿತರ ಸಾವು
ಮೆಕ್ಸಿಕೋ ನಗರ, ಸೆ. 08: ಮಧ್ಯ ಮೆಕ್ಸಿಕನ್ ರಾಜ್ಯ ಹಿಡಾಲ್ಗೊದಲ್ಲಿನ ಪ್ರವಾಹದ ಪರಿಣಾಮ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾದ ಪರಿಣಾಮ ಕೋವಿಡ್ -19 ಆಸ್ಪತ್ರೆಯಲ್ಲಿ ಆಮ್ಲಜನಕ ಪೂರೈಸಲಾಗದ ಕಾರಣ 17 ಸೋಂಕಿತರು ಮೃತಪಟ್ಟಿದ್ದಾರೆ.
ಅಧ್ಯಕ್ಷ ಆಂಡ್ರೆಸ್ ಮ್ಯಾನುಯೆಲ್ ಲೋಪೆಜ್ ಒಬ್ರಡೋರ್ ಈ ಕುರಿತು ಮಾಹಿತಿ ನೀಡಿದ್ದು, "ಹಿಡಾಲ್ಗೊದಲ್ಲಿ ತುಲಾ ನದಿ ಪ್ರವಾಹದಿಂದಾಗಿ ಐಎಂಎಸ್ಎಸ್ ಆಸ್ಪತ್ರೆ ನಡುಗಡ್ಡೆಯಂತಾಗಿ, 17 ರೋಗಿಗಳು ಸಾವನ್ನಪ್ಪಿರುವುದಕ್ಕೆ ನನಗೆ ತುಂಬಾ ದುಃಖವಾಗಿದೆ. ಮೆಕ್ಸಿಕೋ ನಗರ ಕಣಿವೆಯಾದ್ಯಂತ ಸಾಕಷ್ಟು ಮಳೆಯಾಗಿದೆ ಮತ್ತು ಮಳೆ ಮುಂದುವರಿದಿದ” ಎಂದಿದ್ದಾರೆ.
ತಗ್ಗು ಪ್ರದೇಶದ ನಿವಾಸಿಗಳು ಸುರಕ್ಷಿತ ಪ್ರದೇಶಗಳಿಗೆ ತೆರಳಿ ಆಶ್ರಯ ಪಡೆಯಬೇಕು ಎಂದು ಒಬ್ರಡಾರ್ ಟೆಲಿಗ್ರಾಂನಲ್ಲಿ ಬರೆದಿದ್ದಾರೆ.
ಸೋಮವಾರ ತಡರಾತ್ರಿ ಸುರಿದ ಧಾರಾಕಾರ ಮಳೆಗೆ ರಾಜ್ಯವು ತತ್ತರಿಸಿದ್ದು, ಪ್ರವಾಹ ಉಂಟಾಗಿದೆ. ಇದರಿಂದ ಕೋವಿಡ್ ಆಸ್ಪತ್ರೆಯ ಟ್ರಾನ್ಸ್‌ಫಾರ್ಮರ್ ಜಖಂಗೊಂಡು ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಿದೆ.