ಮೆಕ್ಸಿಕೋ ; ಭೀಕರ ಬಸ್ ಅಪಘಾತ... 19 ಸಾವು
ಮೆಕ್ಸಿಕೋ, ನ 27: ಮಧ್ಯ ಮೆಕ್ಸಿಕೋದಲ್ಲಿ ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ ಬಸ್ಸೊಂದು ಅಪಘಾತಕ್ಕೀಡಾಗಿ 19 ಮಂದಿ ಸಾವನ್ನಪ್ಪಿ, 32 ಮಂದಿ ಗಾಯಗೊಂಡಿರುವ ಘಟನೆ ನಡೆದಿದೆ. ಬ್ರೇಕ್ ವಿಫಲಗೊಂಡು ಬಸ್ ಮೆಕ್ಸಿಕೋ ಸರ್ಕಾರಿ ಕಟ್ಟಡಕ್ಕೆ ಡಿಕ್ಕಿ ಹೊಡೆದು ದುರಂತ ಸಂಭವಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮೆಕ್ಸಿಕೋ ನಗರದ ನೈಋತ್ಯ ಭಾಗದಲ್ಲಿರುವ ಜೋಕ್ವಿಸಿಂಗೋ ಪಟ್ಟಣದಲ್ಲಿ ಈ ಅಪಘಾತ ಸಂಭವಿಸಿದೆ ಎಂದು ಒಳಾಡಳಿತ ಕಾರ್ಯದರ್ಶಿ ರಿಕಾರ್ಡೊ ಡಿ ಲಾ ಕ್ರೂಜ್ ತಿಳಿಸಿದ್ದಾರೆ.
ನತದೃಷ್ಟ ಬಸ್ ಪಶ್ಚಿಮ ರಾಜ್ಯವಾದ ಮೈಕೋವಾಕನ್‌ನಿಂದ, ಶತಮಾನಗಳಿಂದ ರೋಮನ್ ಕ್ಯಾಥೋಲಿಕ್ ಭಕ್ತಾದಿಗಳು ಸಂದರ್ಶಿಸುವ ಪವಿತ್ರ ಚಲ್ಮಾ ಪಟ್ಟಣಕ್ಕೆ ಪ್ರಯಾಣಿಸುತ್ತಿದ್ದಾಗ ಅಪಘಾತ ಸಂಭವಿಸಿದೆ ಎಂದು ಅವರು ಹೇಳಿದ್ದಾರೆ. ಆದರೆ, ಗಾಯಗೊಂಡ ಪ್ರಯಾಣಿಕರ ಸ್ಥಿತಿಯ ಬಗ್ಗೆ ತಕ್ಷಣ ಯಾವುದೇ ಮಾಹಿತಿ ಲಭ್ಯವಾಗಿಲ್ಲ ಎಂದು ಅವರು ತಿಳಿಸಿದ್ದಾರೆ. ಮೇಲಾಗಿ ಬಹಳಷ್ಟು ಮಂದಿ ಮೆಕ್ಸಿಕನ್ನರು ಡಿಸೆಂಬರ್ 12 ರ ವರ್ಜಿನ್ ಆಫ್ ಗ್ವಾಡಾ ಲುಪೇ ದಿನ ಸಮೀಪಿಸುತ್ತಿರುವ ಕಾರಣ ಧಾರ್ಮಿಕ ಯಾತ್ರೆಗಳಿಗೆ ತೆರಳುತ್ತಾರೆ ಎಂದು ಅವರು ಹೇಳಿದ್ದಾರೆ.
ಕಿರಿದಾದ ರಸ್ತೆಗಳು, ಹಳೆಯ ಬಸ್‌ಗಳಲ್ಲಿ ಪ್ರಯಾಣಿಸುವುದರಿಂದ ಅಪಘಾತಗಳು ಸಂಭವಿಸುತ್ತವೆ ಎಂದು ಅಧಿಕಾರಿಗಳು ಹೇಳುತ್ತಾರೆ. 1521 ರ ಆಕ್ರಮಣಕ್ಕೆ ಮೊದಲು, ಪೂರ್ವ ಹಿಸ್ಪಾನಿಕ್ ಕಾಲದಿಂದಲೂ ಚಲ್ಮಾ ಪವಿತ್ರ ಸ್ಥಳವಾಗಿದೆ. ಸ್ಪಾನಿಷ್ ಗೆ ಸ್ವಾತಂತ್ರ್ಯದ ನಂತರ ಅಜ್ಟೆಕ್ ದೇವರಿಗೆ ಮೀಸಲಾದ ಗುಹೆಯಲ್ಲಿ ಶಿಲುಬೆ ಕಾಣಿಸಿಕೊಂಡಿದ್ದರಿಂದ ಚಲ್ಮಾ ಪ್ರಸಿದ್ದ ಕ್ರಿಶ್ಚಿಯನ್ ತೀರ್ಥ ಕ್ಷೇತ್ರವಾಗಿದೆ. ಹೆಚ್ಚಿನ ಸಂಖ್ಯೆಯ ಭಕ್ತರು ಚಲ್ಮಾ ಸಂದರ್ಶಿಸಲು ಆಗಮಿಸುತ್ತಾರೆ.