ತಾಂತ್ರಿಕ ಶಿಕ್ಷಣ ಸಂಸ್ಥೆ ಪುನರಾರಂಭಕ್ಕೆ ಸಭೆ ನಡೆಸಿ ತೀರ್ಮಾನ: ಮಾಮನಿ
ಸವದತ್ತಿ 08: ಹಲವು ವರ್ಷಗಳ ಹಿಂದೆ ಸ್ಥಗಿತಗೊಂಡಿರುವ ರೇಣುಕಾ ಯಲ್ಲಮ್ಮಾ ತಾಂತ್ರಿಕ ಶಿಕ್ಷಣ ಸಂಸ್ಥೆಯನ್ನು ಪುನರಾರಂಭಿಸಬೇಕೆಂಬ ವಿಚಾರಗಳು ಕೇಳಿ ಬರುತ್ತಿದ್ದು, ಪ್ರಾರಂಭಿಸುವ ವಿಚಾರವಾಗಿ ಈ ಭಾಗದಲ್ಲಿನ ವಿದ್ಯಾರ್ಥಿಗಳ ಆಸಕ್ತಿ ಮತ್ತು ಆಡಳಿತಾತ್ಮಕ ತೊಂದರೆಗಳತ್ತ ವಿಶೇಷ ಗಮನ ಹರಿಸಬೇಕಾಗುತ್ತದೆ ಎಂದು ವಿಧಾನಸಭೆ ಉಪಸಭಾಧ್ಯಕ್ಷ ಆನಂದ ಮಾಮನಿ ಹೇಳಿದರು.
ಸ್ಥಳೀಯ ಮಾಮನಿ ಕಲ್ಯಾಣ ಮಂಟಪದಲ್ಲಿ ರೇಣುಕಾ ಯಲ್ಲಮ್ಮಾ ತಾಂತ್ರಿಕ ಶಿಕ್ಷಣ ಸಂಸ್ಥೆಯ ಹಳೆಯ ವಿದ್ಯಾರ್ಥಿ ಬಳಗದವರು ಹಮ್ಮಿಕೊಂಡ ಸನ್ಮಾನ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.
ಮೂರು ದಶಕಗಳ ಹಿಂದೆ ನಮ್ಮ ತಂದೆ ಸಿ.ಎಮ್.ಮಾಮನಿಯವರು ಹುಟ್ಟು ಹಾಕಿದ ಈ ಸಂಸ್ಥೆಯು ಹಲವಾರು ಕಾರಣಗಳಿಂದ ಅನಿವಾರ್ಯವಾಗಿ ಸ್ಥಗಿತಗೊಂಡಿದೆ. ಅದನ್ನು ಪುನರಾರಂಭಿಸಬೇಕೆಂಬ ಆಸಕ್ತಿಯಿದ್ದು, ಅದರ ಕುರಿತು ಒಮ್ಮೆ ಎಲ್ಲರೊಂದಿಗೆ ಸಭೆ ನಡೆಸಿ ತೀರ್ಮಾಣ ತೆಗೆದುಕೊಳ್ಳಲಾಗುವುದು ಎಂದರು.
ಮನೋಹರ ಶೆಟ್ಟರ ಅಧ್ಯಕ್ಷತೆವಹಿಸಿದ್ದರು.
ಶ್ರೀ ರೇಣುಕಾ ಯಲ್ಲಮ್ಮಾ ತಾಂತ್ರಿಕ ಶಿಕ್ಷಣ ಸಂಸ್ಥೆಯ ಹಳೆಯ ವಿದ್ಯಾರ್ಥಿ ಬಳಗದವತಿಯಿಂದ ವಿಧಾನಸಭೆ ಉಪಸಭಾಧ್ಯಕ್ಷ ಆನಂದ ಮಾಮನಿಯವರನ್ನು ಸನ್ಮಾನಿಸಲಾಯಿತು.
ರವಿ ಸಬರದ, ಈಶ್ವರ ಯಾದವಾಡ, ವೀರೇಶ ಬ್ಯಾಹಟ್ಟಿ, ವಿಷ್ಣು ತೇರದಾಳ, ಉಮೇಶ ಸರದಾರ, ರಾಜು ಸುರಪುರ, ಉಮೇಶ ರಾಮದುರ್ಗ ಹಾಗೂ ಶ್ರೀ ರೇಣುಕಾ ಯಲ್ಲಮ್ಮಾ ತಾಂತ್ರಿಕ ಶಿಕ್ಷಣ ಸಂಸ್ಥೆಯ ಹಳೆಯ ವಿದ್ಯಾರ್ಥಿ ಬಳಗದ ಸದಸ್ಯರು ಉಪಸ್ಥಿತರಿದ್ದರು.