ಪಾಕಿಸ್ತಾನದ ವಿರುದ್ಧ ಫ್ರಾನ್ಸ್ ನಲ್ಲಿ ಬೃಹತ್ ಪ್ರತಿಭಟನೆ; ಕಪ್ಪು ಪಟ್ಟಿಗೆ ಪಾಕ್ ಸೇರಿಸಲು ಆಗ್ರಹ
ಪ್ಯಾರಿಸ್: ಫೆಬ್ರವರಿ 20: ಪಾಕಿಸ್ತಾನದ ಹಣೆಬರಹವನ್ನು ಇನ್ನೇನು ಕೆಲವೇ ದಿನಗಳಲ್ಲಿ ಎಫ್ಎಟಿಎಫ್ ನಿರ್ಧಾರ ಮಾಡಲಿದೆ. ಇಮ್ರಾನ್ ಖಾನ್ ನೇತೃತ್ವದ ಸರ್ಕಾರಕ್ಕೆ ಈ ಬಾರಿಯ ಎಫ್ಎಟಿಎಫ್ ಸಭೆ ಮಾಡು ಇಲ್ಲವೇ ಮಡಿ ಎಂಬಂತಾಗಿದೆ. ಭಯೋತ್ಪಾದನಾ ಚಟುವಟಿಕೆಗಳಿಗೆ ಕುಮ್ಮಕ್ಕು ನೀಡುತ್ತಿರುವ ಪಾಕಿಸ್ತಾನ, ಗ್ರೇ ಲಿಸ್ಟ್ ನಿಂದ ಬ್ಲ್ಯಾಕ್ ಪಟ್ಟಿಗೆ ಸ್ಥಳಾಂತರಗೊಳ್ಳುವ ಸಾಧ್ಯತೆ ಇದೆ ಎಂದು ಹೆಚ್ಚಿನ ತಜ್ಞರು ಅಭಿಪ್ರಾಯಪಡುತ್ತಿದ್ದಾರೆ.
ಈ ಮಧ್ಯೆ, ಫ್ರಾನ್ಸ್‌ನಲ್ಲಿರುವ ಫೈನಾನ್ಶಿಯಲ್ ಆಕ್ಷನ್ ಟಾಸ್ಕ್ ಫೋರ್ಸ್ (ಎಫ್ಎಟಿಎಫ್) ಕಚೇರಿಯ ಹೊರಗೆ ಶನಿವಾರ ಬೃಹತ್ ಪ್ರತಿಭಟನೆ ನಡೆಯಿತು. ಭಯೋತ್ಪಾದನೆಗೆ ಕುಮ್ಮಕ್ಕು ಹಾಗೂ ಹಣ ಒದಗಿಸುತ್ತಿರುವ ಪಾಕಿಸ್ತಾನವನ್ನು ಕಪ್ಪು ಪಟ್ಟಿಗೆ ಸೇರಿಸಬೇಕು ಎಂದು ಪ್ರತಿಭಟನಕಾರರು ಒತ್ತಾಯಿಸಿದ್ದಾರೆ. ಈ ಪ್ರತಿಭಟನೆಯಲ್ಲಿ ಅಫ್ಘಾನ್, ಬಲೂಚ್ ಮತ್ತು ಉಯ್ಘರ್ ಸಮುದಾಯದ ಜನರು ಸೇರಿದ್ದರು. ಭಯೋತ್ಪಾದನೆಯನ್ನು ಜಾಗತಿಕವಾಗಿ ಹರಡುವಲ್ಲಿ ಪಾಕಿಸ್ತಾನ ಬಹು ದೊಡ್ಡ ಪಾತ್ರವನ್ನು ನಿರ್ವಹಿಸುತ್ತಿದೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಪ್ರತಿಭಟನೆಗೆ ಸಂಬಂಧಿಸಿದ ವೀಡಿಯೊವನ್ನು ಪಾಕಿಸ್ತಾನಿ ಪತ್ರಕರ್ತೆ ತಾಹಾ ಸಿದ್ದಿಕಿ ಅವರು ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಈ ವಿಡಿಯೋದಲ್ಲಿ ಪಾಕಿಸ್ತಾನದ ವಿರುದ್ಧ ಪ್ರತಿಭಟನಾಕಾರರು ಹೋಲ್ಡಿಂಗ್ಸ್, ಬ್ಯಾನರ್ ಗಳನ್ನು ಹಿಡಿದು ನಿಂತಿರುವುದು ಕಂಡುಬಂದಿದೆ. ಈ ಪ್ರತಿಭಟನೆಯಲ್ಲಿ ಇರುವ ಸಾಕಷ್ಟು ಮಂದಿ ಪಾಕ್ ಪ್ರಚೋದಿತ ಭಯೋತ್ಪಾದನೆ ಹಾಗೂ ಪಾಕ್ ಸೇನೆಯಿಂದ ಅನ್ಯಾಯಕ್ಕೊಳಗಾಗಿದ್ದಾರೆ. ಪ್ಯಾರಿಸ್‌ನಲ್ಲಿ ಎಫ್‌ಎಟಿಎಫ್ ಪ್ಲೀನರಿ ಮತ್ತು ವರ್ಕಿಂಗ್ ಗ್ರೂಪ್‌ನ ಸಭೆ ಫೆಬ್ರವರಿ 21ರಿಂದ ಮಾರ್ಚ್ 4ರವರೆಗೆ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಈ ಸಭೆಗೂ ಮುನ್ನ ಆಫ್ಗಾನ್, ಬಲೂಚ್, ಉಯ್ಘರ್ ಸಮುದಾಯಕ್ಕೆ ಸೇರಿದ ಜನರು ಪ್ಯಾರಿಸ್ ಕಚೇರಿ ಮುಂದೆ ಪ್ರತಿಭಟಿಸುತ್ತಿದ್ದಾರೆ.
ಜೂನ್ 2018 ರಿಂದ ಪಾಕಿಸ್ತಾನವು FATF ನ ಗ್ರೇ (ಬೂದು) ಪಟ್ಟಿಯಲ್ಲಿದೆ. ಈ ಬೂದು ಪಟ್ಟಿಯು ರಾಷ್ಟ್ರವೊಂದರ ಆಮದು, ರಫ್ತು ಮತ್ತು ಅಂತರಾಷ್ಟ್ರೀಯ ಸಾಲದ ಮೇಲೆ ಪರಿಣಾಮ ಬೀರಲಿದೆ. ಇಮ್ರಾನ್ ಖಾನ್ ಪಾಕಿಸ್ತಾನದ ಪ್ರಧಾನಿಯಾದ ನಂತರ, ಪಾಕಿಸ್ತಾನವನ್ನು ಗ್ರೇ ಲಿಸ್ಟ್‌ನಿಂದ ಹೊರಗಿಡಬೇಕು ಎಂದು ನಿರಂತರವಾಗಿ ಹೇಳುತ್ತಲೇ ಬಂದಿದ್ದಾರೆ. ಇದಕ್ಕೆ ಪ್ರತಿಯಾಗಿ ಅಧಿಕಾರಿಗಳು, ಎಫ್ಎಟಿಎಫ್ ನ ಷರತ್ತುಗಳನ್ನು ಪಾಕಿಸ್ತಾನ ಪೂರೈಸಿಲ್ಲ ಎಂದು ಹೇಳುತ್ತಿದ್ದಾರೆ. ಭಯೋತ್ಪಾದಕ ಸಂಘಟನೆಗಳ ವಿರುದ್ಧ ಕ್ರಮ ಕೈಗೊಳ್ಳುವಲ್ಲಿ ಪಾಕಿಸ್ತಾನ ಸರ್ಕಾರ ವಿಫಲವಾಗಿದ್ದು, ತೆಹ್ರೀಕ್-ಎ-ತಾಲಿಬಾನ್ ಪಾಕಿಸ್ತಾನ್ (ಟಿಟಿಪಿ) ಮುಂದೆ ಇಮ್ರಾನ್ ಖಾನ್ ಮಂಡಿಯೂರಿ ಕುಳಿತಿದ್ದಾರೆ ಎಂದು ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ. ಹೀಗಾಗಿ, ಪಾಕಿಸ್ತಾನದ ಆಸೆ ಈಡೇರುವುದು ತುಂಬಾನೆ ಕಡಿಮೆ ಎಂದು ಹೇಳಲಾಗುತ್ತಿದೆ.
ಅಫ್ಘಾನ್ ತಾಲಿಬಾನ್ (ಟಿಎಲ್‌ಪಿ) ಜೊತೆ ಮಾತುಕತೆ ನಡೆಸಲು ಪಾಕಿಸ್ತಾನ ಸರ್ಕಾರವೂ ಸಿದ್ಧವಾಗಿದೆ, ಅದು ಭಯೋತ್ಪಾದಕ ಸಂಘಟನೆಯಲ್ಲ ಎಂದು ಪಾಕಿಸ್ತಾನ ಹೇಳುತ್ತಿದೆ. ಇನ್ನೊಂದೆಡೆ “ಎಫ್‌ಎಟಿಎಫ್ ಪಾಕಿಸ್ತಾನವನ್ನು ಕಪ್ಪು ಪಟ್ಟಿಗೆ’ ಸೇರಿಸಿದರೆ, ಆರ್ಥಿಕ ಶಿಕ್ಷೆ ಮತ್ತು ಇತರ ನಿರ್ಬಂಧಿತ ಕ್ರಮಗಳನ್ನು ಅಳವಡಿಸಿಕೊಳ್ಳಲಾಗುವುದು” ಎಂದು ಪಾಕಿಸ್ತಾನಿ ಅರ್ಥಶಾಸ್ತ್ರಜ್ಞ ಡಾ ನಾಫೆ ಸರ್ದಾರ್ ಹೇಳಿದ್ದಾರೆ. ಅಷ್ಟೇ ಅಲ್ಲದೆ, ಇದು ಪಾಕಿಸ್ತಾನದ ಆರ್ಥಿಕತೆಗೆ ದೊಡ್ಡ ಹೊಡೆತವಾಗಲಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ. FATPನ ಗ್ರೇ-ಲಿಸ್ಟಿಂಗ್‌ನಿಂದಾಗಿ 2008-2019ರ ಅವಧಿಯಲ್ಲಿ ಪಾಕ್ ನ ಆರ್ಥಿಕತೆ ಸುಮಾರು $38 ಶತಕೋಟಿ ಕುಸಿತವನ್ನು ಕಂಡಿತ್ತು. ಗ್ಲೋಬಲ್ ಸ್ಯಾಟ್ರೇಟ್ ವ್ಯೂ ಪ್ರಕಾರ, ಪಾಕಿಸ್ತಾನವನ್ನು ‘ಕಪ್ಪು ಪಟ್ಟಿ’ಗೆ ಸೇರಿಸುವ ಬಲವಾದ ಸೂಚನೆಗಳಿವೆ ಎಂದು ಹೇಳಿದೆ.