ಲೆಬನಾನ್ ಬಂದರಿನಲ್ಲಿ ಭಾರಿ ಸ್ಫೋಟ; 78 ಜನ ಸಾವು, ಸಾವಿರಾರು ಜನರಿಗೆ ಗಾಯ
ಬೈರುತ್, ಆಗಸ್ಟ್ 5: ಲೆಬನಾನಿನ ರಾಜಧಾನಿ ಬೈರುತ್ ನ ಬಂದರು ಪ್ರದೇಶದಲ್ಲಿ ಮಂಗಳವಾರ ಸಂಜೆ ಸಂಭವಿಸಿದ ಭೀಕರ ಸ್ಫೋಟದಲ್ಲಿ ಕನಿಷ್ಠ 78 ಜನರು ಸಾವನ್ನಪ್ಪಿದ್ದು, 4,000 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ.
ಅಲ್-ಜಜೀರಾ ಟೆಲಿವಿಷನ್ ನ ವರದಿಯ ಪ್ರಕಾರ, ಬೈರುತ್ ಬಂದರಿನಲ್ಲಿ ನಡೆದ ಸ್ಫೋಟದಲ್ಲಿ 78 ಜನರು ಸಾವನ್ನಪ್ಪಿದ್ದಾರೆ ಮತ್ತು 4000 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಸ್ಪೋಟದ ಸಮೀಪದ ಒಂದು ಮೈಲಿಯಲ್ಲಿ ಕಟ್ಟಡಗಳು ಬಿದ್ದಿದ್ದು, ಅವಶೇಷಗಳಡಿ ಜನ ಸಿಲುಕಿದ್ದಾರೆ.
ಲೆಬನಾನಿನ ಆಂತರಿಕ ಸಚಿವ ಮೊಹಮ್ಮದ್ ಫಾಹ್ಮಿ ಇನ್ನು ಈ ಸ್ಪೋಟದ ಬಗ್ಗೆ ಖಚಿತ ಮಾಹಿತಿ ಇಲ್ಲ ಎಂದಿದ್ದಾರೆ.
ಬೈರುತ್ ಸ್ಫೋಟಕ್ಕೆ ಕಾರಣರಾದವರು ಭಾರಿ ಬೆಲೆ ತೆರಬೇಕಾಗುತ್ತದೆ ಎಂದು ಲೆಬನಾನ್ ಪ್ರಧಾನಿ ಹಸನ್ ಡಯಾಬ್ ಮಂಗಳವಾರ ತಿಳಿಸಿದ್ದಾರೆ.
ಪ್ರಧಾನಿ ಹಸನ್ ಡಯಾಬ್ ನೆರೆ ದೇಶಗಳಿಗೆ ಲೆಬನಾನ್‌ಗೆ ಸಹಾಯ ಮಾಡುವಂತೆ ಮನವಿ ಮಾಡಿದ್ದಾರೆ. "ನಾವು ಪ್ರತಿ ಹಂತದಲ್ಲೂ ಜವಾಬ್ದಾರಿಯೊಂದಿಗೆ ಸಹಕರಿಸಲು ಸಿದ್ಧರಿದ್ದೇವೆ" ಎಂದು ಹೇಳಿದ್ದಾರೆ. ಈ ಭೀಕರ ಸ್ಫೋಟದಿಂದಾಗಿ ಬೈರುತ್ ನ ರಫೀಕ್ ಹರಿರಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೂ ಹಾನಿಯಾಗಿದೆ. ಫ್ರಾನ್ಸ್ ಮತ್ತು ಇಸ್ರೇಲ್ ಸೇರಿದಂತೆ ಇನ್ನೂ ಅನೇಕ ದೇಶಗಳು ಲೆಬನಾನ್‌ಗೆ ಸಾಧ್ಯವಿರುವ ಎಲ್ಲ ಸಹಾಯವನ್ನು ಮಾಡುವ ಭರವಸೆ ನೀಡಿವೆ.
ಗಾಯಾಳುಗಳನ್ನು ಆಸ್ಪತ್ರೆಗಳಿಗೆ ದಾಖಲಿಸಲಾಗುತ್ತಿದೆ. ಅನೇಕ ಜನರು ಅವಶೇಷಗಳ ಅಡಿಯಲ್ಲಿ ಸಿಕ್ಕಿಕೊಂಡಿರುವ ಭಯವಿದೆ. ಸ್ಥಳೀಯ ಆಸ್ಪತ್ರೆಗಳು ಸ್ಫೋಟದಲ್ಲಿ ಗಾಯಗೊಂಡವರನ್ನು ಉಳಿಸಲು ರಕ್ತದಾನ ಮಾಡುವಂತೆ ಹೆಚ್ಚಿನ ಸಂಖ್ಯೆಯ ಜನರಿಗೆ ಮನವಿ ಮಾಡಿವೆ.