ಮಾರಿಯುಪೋಲ್ ಆಸ್ಪತ್ರೆ ರಷ್ಯಾ ವಶದಲ್ಲಿ; 400 ಮಂದಿ ಒತ್ತೆಯಾಳು! ಮೂವರು ಭಾರತೀಯರು ಪಾರು
ಕೈವ್: ಮಾರ್ಚ್ 16 : ರಷ್ಯಾ-ಉಕ್ರೇನ್ ನಡುವಿನ ಯುದ್ಧ 21ನೇ ದಿನಕ್ಕೆ ಕಾಲಿಟ್ಟಿದೆ. ಉಕ್ರೇನಿಯನ್ ನಗರಗಳಲ್ಲಿ ರಷ್ಯಾ ನಿರಂತರವಾಗಿ ಬಾಂಬ್ ದಾಳಿ ನಡೆಸುತ್ತಿದೆ. ದಾಳಿಯ ಮಧ್ಯೆ ಹಲವು ಭಾರತೀಯರು ಸಿಕ್ಕಿಬಿದ್ದಿದ್ದರು. ಅವರನ್ನು ರಷ್ಯಾದ ನಗರಗಳ ಮೂಲಕ ಮರಳಿ ತರಲಾಗುತ್ತಿದೆ. ಖೆರ್ಸನ್‌ನಲ್ಲಿ ಸಿಲುಕಿರುವ 3 ಭಾರತೀಯರನ್ನು ಸಿಮ್ಫೆರೋಪೋಲ್ ಮತ್ತು ಮಾಸ್ಕೋ ಮೂಲಕ ಸ್ಥಳಾಂತರಿಸಲಾಯಿತು.
ಈ ನಡುವೆ ಮಾರಿಯುಪೋಲ್‌ನಲ್ಲಿರುವ ಅತಿದೊಡ್ಡ ಆಸ್ಪತ್ರೆಯನ್ನು ರಷ್ಯಾ ವಶಪಡಿಸಿಕೊಂಡಿದೆ. ವೈದ್ಯರು ಮತ್ತು ರೋಗಿಗಳು ಸೇರಿದಂತೆ 400 ಜನರನ್ನು ರಷ್ಯಾದ ಪಡೆಗಳು ಒತ್ತೆಯಾಳಾಗಿಸಿಕೊಂಡಿದ್ದಾರೆ ಎಂದು ಇಲ್ಲಿನ ಅಧಿಕಾರಿಗಳು ಹೇಳಿದ್ದಾರೆ. ಅವರನ್ನು ಹೊರಗೆ ಹೋಗಲು ಬಿಡುತ್ತಿಲ್ಲ ಎಂದು ಉಕ್ರೇನ್ ಆರೋಪಿಸಿದೆ.