ಇಷ್ಟವಿದ್ದರೆ ಪ್ರಾಮಾಣಿಕವಾಗಿ ಕೆಲಸ ಮಾಡಿ ಇಲ್ಲಾ ಬೇರೆಡೆ ಹೋಗಿ
ಅಧಿಕಾರಿಗಳನ್ನು ತೀವ್ರ ತರಾಟೆಗೆ ತೆಗೆದುಕೊಂಡ ಆನಂದ ಮಾಮನಿ: ಯಲ್ಲಮ್ಮನಗುಡ್ಡದಲ್ಲಿ ವ್ಯವಸ್ಥಾಪನಾ ಸಮಿತಿ ಸಭೆ
ಉಗರಗೋಳ 19: ಇಷ್ಟವಿದ್ದರೆ ಪ್ರಾಮಾಣಿಕವಾಗಿ ಕೆಲಸ ಮಾಡಿ. ಇಲ್ಲವೇ ಬೇರೆಡೆ ವರ್ಗಾವಣೆ ಮಾಡಿಸಿಕೊಂಡು ಹೋಗಿ ಎಂದು ಯಲ್ಲಮ್ಮ ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಸದಸ್ಯರೂ ಆಗಿರುವ ವಿಧಾನಸಭೆ ಉಪಸಭಾಧ್ಯಕ್ಷ ಆನಂದ ಮಾಮನಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
ಯಲ್ಲಮ್ಮನಗುಡ್ಡದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ವ್ಯವಸ್ಥಾಪನಾ ಸಮಿತಿ ಸಭೆ ಹಾಗೂ ಅಧಿಕಾರಿಗಳ ಮತ್ತು ಸಿಬ್ಬಂದಿಯ ಸಭೆಯಲ್ಲಿ ಮಾತನಾಡಿದ ಅವರು, ದಕ್ಷಿಣ ಭಾರತದ ಪ್ರಸಿದ್ಧ ಧಾರ್ಮಿಕ ಕ್ಷೇತ್ರ ಯಲ್ಲಮ್ಮನಗುಡ್ಡಕ್ಕೆ ದೇಶದ ಮೂಲೆ ಮೂಲೆಗಳಿಂದ ಲಕ್ಷಾಂತರ ಭಕ್ತರು ಬರುತ್ತಾರೆ. ಇಲ್ಲಿಗೆ ಬರುವ ಭಕ್ತರು ಹಾಗೂ ಸ್ಥಳೀಯ ವ್ಯಾಪಾರಿಗಳಿಗೆ ಕುಡಿಯಲೂ ನೀರು ಕೊಡದಿದ್ದರೆ ಹೇಗೆ ಎಂದು ಪ್ರಶ್ನಿಸಿದರು. ಇಂತಹ ದೊಡ್ಡ ದೇವಸ್ಥಾನದಲ್ಲಿ ಕುಡಿಯುವ ನೀರಿನ ಸಮಸ್ಯೆ ಉದ್ಭವಿಸುವಂತೆ ಮಾಡಿದ ಅಧಿಕಾರಿಗಳ ಮೇಲೆ ಕೆಂಡಾಮಂಡಲವಾದರು.
ಇನ್ಮುಂದೆ ಇದೇ ನಿರ್ಲಕ್ಷ್ಯ ಸಲ್ಲದು. ಎಲ್ಲ ಅಧಿಕಾರಿಗಳು ಹಾಗೂ ಸಿಬ್ಬಂದಿ ಕ್ರಿಯಾಶೀಲವಾಗಿ ಕೆಲಸ ಮಾಡಬೇಕು. ತ್ವರಿತವಾಗಿ ಭಕ್ತರ ಸಮಸ್ಯೆಗೆ ಸ್ಪಂದಿಸಬೇಕು. ಎಲ್ಲರೂ ಒಗ್ಗಟ್ಟಾಗಿರಬೇಕು. ಶ್ರೀಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸಬೇಕು ಎಂದು ನಿರ್ದೇಶನ ನೀಡಿದರು.
ದೂರದಿಂದ ಬರುವ ಭಕ್ತರಿಗೆ ಅಗತ್ಯ ಮಾಹಿತಿ ನೀಡಲು ಮೊದಲ ಕೌಂಟರ್ನಲ್ಲಿ 24*7 ಮಾದರಿಯಲ್ಲಿ ದೂರವಾಣಿ ವ್ಯವಸ್ಥೆ ಮಾಡಬೇಕು. ಮೂರು ಕಡೆ ನಾಕಾಗಳಲ್ಲಿ ದೇವಸ್ಥಾನದ ಸಿಬ್ಬಂದಿಯೇ ಕಾರ್ಯ ನಿರ್ವಹಿಸಬೇಕು. ಪವಿತ್ರ ಎಣ್ಣೆ ಹೊಂಡದ ನೀರನ್ನು ಕೆಲವರು ಮಾರಾಟ ಮಾಡುತ್ತಿರುವುದು ಕಂಡು ಬಂದಿದ್ದು, ಕೂಡಲೇ ಇದಕ್ಕೆ ಕಡಿವಾಣ ಹಾಕಬೇಕು. ಯಲ್ಲಮ್ಮ ದೇವಸ್ಥಾನದ ನಾಲ್ಕು ದ್ವಾರ ಬಾಗಿಲುಗಳನ್ನು ತೆರೆಯಬೇಕು. ಶುಚಿತ್ವಕ್ಕೂ ಆದ್ಯತೆ ನೀಡಬೇಕು ಎಂದು ಸೂಚನೆ ನೀಡಿದರು.
ಯಲ್ಲಮ್ಮ ದೇವಸ್ಥಾನದಲ್ಲಿ ಕೆಲಸ ಮಾಡುವ ಅಧಿಕಾರಿಗಳು ಹಾಗೂ ಸಿಬ್ಬಂದಿಗೆ ಸರ್ಕಾರದಿಂದಲೇ ಸೂರು ನಿರ್ಮಿಸಿಕೊಡಲು ಪ್ರಯತ್ನಿಸುತ್ತೇನೆ. 6ನೇ ವೇತನ ಜಾರಿಯಾಗಿದ್ದು, ದೇವಸ್ಥಾನ ಸಿಬ್ಬಂದಿ ಹಾಗೂ ಅಧಿಕಾರಿಗಳ ಸಮಸ್ಯೆಗಳಿಗೆ ಸ್ಪಂದಿಸುತ್ತೇನೆ. ಯಲ್ಲಮ್ಮನಗುಡ್ಡ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ಶ್ರಮಿಸುತ್ತೇನೆ. ನಿಮ್ಮ ಜತೆಯಲ್ಲಿ ಸದಾ ಇದ್ದು ಸಹಕರಿಸುತ್ತೇನೆ ಎಂದು ಭರವಸೆ ಕೊಟ್ಟರು.
ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಬಸಯ್ಯ ಹಿರೇಮಠ, ವಾಯ್ ವಾಯ್ ಕಾಳಪ್ಪನವರ, ಸುನೀಲ ಪೂಜಾರಿ, ಕೋಳ್ಳಪ್ಪಗೌಡ ಗಂದಿಗವಾಡ, ಲಕ್ಷೀ ಹೂಲಿ ಪುಂಡಲೀಕ ಮೇಟಿ, ರಮೇಶ ಗೋಮಡಿ, ಈರಣ್ಣಾ ಚಂದರಗಿ, ಸಿಪಿಆಯ್ ಮಂಜುನಾಥ ನಡುವಿನಮನಿ, ಪಿಎಸ್ಆಯ್ ಶಿವಾನಂದ ಗುಡನಟ್ಟಿ, ದೇವಸ್ಥಾನ ಕಾರ್ಯರ್ವಾಹಕ ಅಧಿಕಾರಿ ರವಿ ಕೋಟಾರಗಸ್ತಿ ದೇವಸ್ಥಾನ ಅಧಿಕಾರಿಗಳು ಹಾಗು ಸಿಬ್ಬಂದಿ ಇದ್ದರು.