ಸಂಸದರಿಂದ ಅಶ್ಲೀಲ ವಿಡಿಯೋ ವೀಕ್ಷಣೆ; ಬ್ರಿಟನ್ ಪಿಎಂ ಬೋರಿಸ್ ಜಾನ್ಸನ್ ಹೇಳಿದ್ದೇನು?
ಲಂಡನ್: ಏಪ್ರಿಲ್ 29: ಯಾವುದೇ ಕೆಲಸದ ಸ್ಥಳದಲ್ಲಿ ಅಶ್ಲೀಲ ಚಿತ್ರಗಳನ್ನು ವೀಕ್ಷಿಸುವುದು ಸ್ವೀಕಾರಾರ್ಹವಲ್ಲ ಎಂದು ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ಅವರು ಹೇಳಿದ್ದಾರೆ. ಗುರುವಾರ ಹೌಸ್ ಆಫ್ ಕಾಮನ್ಸ್‌ನಲ್ಲಿ ಸಂಸದರೊಬ್ಬರು ತಮ್ಮ ಫೋನ್‌ನಲ್ಲಿ ಅಶ್ಲೀಲ ವೀಡಿಯೊಗಳನ್ನು ವೀಕ್ಷಿಸುತ್ತಿದ್ದ ಆರೋಪಗಳ ತನಿಖೆಯ ಕುರಿತು ಪ್ರಶ್ನಿಸಿದಾಗ ಬೋರಿಸ್ ಉತ್ತರಿಸಿದರು.
“ಕೆಲಸದ ಸ್ಥಳದಲ್ಲಿ ಯಾರಾದರೂ ಆ ರೀತಿಯ ಕೆಲಸವನ್ನು ಮಾಡುವುದು ನಿಸ್ಸಂಶಯವಾಗಿ ಸ್ವೀಕಾರಾರ್ಹವಲ್ಲ. ಇದು ದೇಶದಲ್ಲಿನ ಅತ್ಯುನ್ನತ ಸ್ಥಾನ ಅಥವಾ ಕೆಳ ವರ್ಗದ ಯಾವುದೇ ರೀತಿಯ ಕೆಲಸಗಳಿಗೂ ಒಂದೇ ಆಗಿರುತ್ತದೆ” ಎಂದು ಚುನಾವಣಾ ಪ್ರಚಾರದ ಭೇಟಿಯ ಸಂದರ್ಭದಲ್ಲಿ ಆರೋಪಗಳ ಬಗ್ಗೆ ಕೇಳಿದಾಗ ಜಾನ್ಸನ್ ಸುದ್ದಿಗಾರರಿಗೆ ತಿಳಿಸಿದರು.
ಬೋರಿಸ್ ಜಾನ್ಸನ್ ಅವರ ಕನ್ಸರ್ವೇಟಿವ್ ಪಕ್ಷದ ಸದಸ್ಯರೊಬ್ಬರ ಮೇಲೆ ಇಂತಹ ಆರೋಪವಿದ್ದು , ಸೂಕ್ತವಾದ ದೂರುಗಳ ಕಾರ್ಯವಿಧಾನದ ಮೂಲಕವೇ ಕ್ರಮ ತೆಗೆದುಕೊಳ್ಳಬೇಕಾಗುತ್ತದೆ ಎಂದು ಪ್ರಧಾನಿ ಬೋರಿಸ್ ಜಾನ್ಸನ್ ಹೇಳಿದ್ದಾರೆ.