ಸೌಂದತ್ತಿ

ಇಸ್ತಮಾ ಕಾರ್ಯಕ್ರಮಕ್ಕೆ ಶಾಸಕ ವಿಶ್ವಾಸ ವೈದ್ಯ ಭೇಟಿ; ಸರ್ವಧರ್ಮ ಸಮನ್ವಯತೆಗೆ ಕರೆ

ಇಸ್ತಮಾ ಕಾರ್ಯಕ್ರಮಕ್ಕೆ ಶಾಸಕ ವಿಶ್ವಾಸ ವೈದ್ಯ ಭೇಟಿ; ಸರ್ವಧರ್ಮ ಸಮನ್ವಯತೆಗೆ ಕರೆ

ಸವದತ್ತಿ 11: ಪಟ್ಟಣದ ಕರೀಕಟ್ಟಿ ರಸ್ತೆ ಮಾರ್ಗದ ನಿಕ್ಕಂ ಕಲ್ಯಾಣ ಮಂಟಪದ ಎದುರಗಡೆ ಆಯೋಜಿಸಲಾಗಿದ್ದ ಮುಸ್ಲಿಂ ಸಮಾಜದ ಪವಿತ್ರ ’ಇಸ್ತಮಾ’ ಧಾರ್ಮಿಕ ಕಾರ್ಯಕ್ರಮಕ್ಕೆ  ಶಾಸಕ ವಿಶ್ವಾಸ  ವೈದ್ಯ ಅವರು ಭೇಟಿ ನೀಡಿ, ಸಮಾಜದ ಬಾಂಧವರೊಂದಿಗೆ ಸೌಹಾರ್ದಯುತವಾಗಿ ಸಮಾಲೋಚನೆ ನಡೆಸಿದರು. 

ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಅವರು ಸಮಾಜದಲ್ಲಿ ಶಾಂತಿ ಮತ್ತು ಐಕ್ಯತೆಯ ಮಹತ್ವವನ್ನು  ಹೇಳಿದರು.ಇಂತಹ ಧಾರ್ಮಿಕ ಸಭೆಗಳು ಕೇವಲ ಒಂದು ಧರ್ಮಕ್ಕೆ ಸೀಮಿತವಾಗದೆ, ಸಮಾಜದಲ್ಲಿ ಸರ್ವಧರ್ಮ ಸಮನ್ವಯತೆ ಮತ್ತು ಶಾಂತಿ ಸಹಬಾಳ್ವೆಯ ಸಂದೇಶವನ್ನು ಸಾರುತ್ತವೆ. ವಿಭಿನ್ನ ವರ್ಗದ ಜನರು ಒಗ್ಗೂಡಿ ನಡೆಸುವ ಕಾರ್ಯಕ್ರಮಗಳು ಸಮಾಜದಲ್ಲಿನ ಭಾವೈಕ್ಯತೆಯನ್ನು ಮತ್ತಷ್ಟು ಗಟ್ಟಿಗೊಳಿಸುತ್ತವೆ. ಕ್ಷೇತ್ರದ ಎಲ್ಲಾ ವರ್ಗದ ಜನರ ಹಿತರಕ್ಷಣೆ ಮತ್ತು ಸರ್ವತೋಮುಖ ಅಭಿವೃದ್ಧಿಗೆ ತಾವು ಸದಾ ಬದ್ಧರಾಗಿರುವುದಾಗಿ ಭರವಸೆ ನೀಡಿದರು. ನಮ್ಮ ಸವದತ್ತಿ ಕ್ಷೇತ್ರವು ಸರ್ವಧರ್ಮಗಳ ಶಾಂತಿಯ ತೋಟವಾಗಬೇಕು. ಪ್ರತಿಯೊಬ್ಬರ ಧಾರ್ಮಿಕ ಭಾವನೆಗಳಿಗೆ ಗೌರವ ನೀಡಿ, ಅಭಿವೃದ್ಧಿ ಪಥದಲ್ಲಿ ಎಲ್ಲರನ್ನೂ ಒಟ್ಟಾಗಿ ಕರೆದೊಯ್ಯುವುದೇ ನನ್ನ ಮುಖ್ಯ ಗುರಿ, ಎಂದು ಅವರು ತಮ್ಮ ಆಶಯ ವ್ಯಕ್ತಪಡಿಸಿದರು.ಕಾರ್ಯಕ್ರಮದಲ್ಲಿ ಮುಸ್ಲಿಂ ಸಮಾಜದ ಹಿರಿಯರು ಮತ್ತು ಯುವಕರೊಂದಿಗೆ ಆತ್ಮೀಯವಾಗಿ ಬೆರೆತ  ಮುಖಂಡರೊಂದಿಗೆ ಕ್ಷೇತ್ರದ ಪ್ರಗತಿಯ ಕುರಿತು ಚರ್ಚಿಸಿದರು. ತದನಂತರ ನಡೆದ ಪ್ರಾರ್ಥನೆಯಲ್ಲಿ (ದುವಾ) ಪಾಲ್ಗೊಂಡು, ಎಲ್ಲರಿಗೂ ಶ್ರೇಯಸ್ಸಾಗಲಿ ಎಂದು ಹಾರೈಸಿದರು. 

ಈ ಸಂದರ್ಭದಲ್ಲಿ ಮುಸ್ಲಿಂ ಸಮಾಜದ ಧಾರ್ಮಿಕ ಗುರುಗಳು, ಸಮಾಜದ ಪ್ರಮುಖ ಮುಖಂಡರು ಹಾಗೂ ಕ್ಷೇತ್ರದ ಸಾವಿರಾರು ಹಿತೈಷಿಗಳು ಮತ್ತು ಸಾರ್ವಜನಿಕರು ಉಪಸ್ಥಿತರಿದ್ದರು. 


ಸುದ್ದಿ ಓದಿ