ಚೀನಾದ 10 ನಗರಗಳಲ್ಲಿ ಲಾಕ್‌ಡೌನ್! 3 ಕೋಟಿ ಅಧಿಕ ಮಂದಿ ಬಂಧಿ
ಬೀಜಿಂಗ್: ಮಾರ್ಚ್ 15: ಚೀನಾದಲ್ಲಿ ಕೊರೊನಾ ಸೋಂಕಿನ ಹೊಸ ಅಲೆ ಶುರುವಾಗಿದೆ. ಹೊಸ ಪ್ರಕರಣಗಳು ಒಂದೇ ದಿನದಲ್ಲಿ ಎರಡು ಪಟ್ಟು ಹೆಚ್ಚಾಗಿದೆ. ಮಂಗಳವಾರ, ಚೀನಾದಲ್ಲಿ 5280 ಹೊಸ ಕೊರೊನಾ ಪ್ರಕರಣಗಳು ಕಂಡುಬಂದಿವೆ. ಇದು ಕೋವಿಡ್ ಸಾಂಕ್ರಾಮಿಕ ದಿನಗಳ ಬಳಿಕ ಅತ್ಯಧಿಕ ವೇಗದಲ್ಲಿ ದಾಖಲಾದ ಸೋಂಕಿನ ಪ್ರಕರಣಗಳಾಗಿವೆ. ಮತ್ತೊಂದೆಡೆ ಡೆಲ್ಟಾ ಮತ್ತು ಒಮೈಕ್ರಾನ್ ರೂಪಾಂತರಗಳ ಸಂಯೋಜನೆಯಿಂದಾಗಿ ಹುಟ್ಟಿಕೊಳ್ಳುವ ಹೊಸ ರೂಪಾಂತರವು ನಾಲ್ಕನೇ ಅಲೆಗೆ ಕಾರಣವಾಗುವ ಸಾಧ್ಯತೆ ಇದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ವಿಶ್ವದ ರಾಷ್ಟ್ರಗಳನ್ನು ಎಚ್ಚರಿಸಿದೆ.
ಹೊಸ ಕೊರೊನಾ ಅಲೆಯಿಂದಾಗಿ ಚೀನಾದ 10 ನಗರಗಳಲ್ಲಿ ಲಾಕ್‌ಡೌನ್ ಹೇರಲಾಗಿದೆ. 3 ಕೋಟಿಗೂ ಹೆಚ್ಚು ಜನರು ಮತ್ತೊಮ್ಮೆ ತಮ್ಮ ಮನೆಗಳಲ್ಲಿ ಬಂಧಿಯಾಗಿದ್ದಾರೆ. ಜಿಲಿನ್ ಪ್ರಾಂತ್ಯವು ಹೊಸ ಅಲೆಯಿಂದ ಹೆಚ್ಚು ಪ್ರಭಾವಿತವಾಗಿದೆ. ಕೊರೊನಾ ಪ್ರಕರಣಗಳ ಉಲ್ಬಣದಿಂದಾಗಿ ಕನಿಷ್ಠ 10 ನಗರಗಳು ಮತ್ತು ಕೌಂಟಿಗಳು (ಆಡಳಿತ ದೃಷ್ಟಿಯಿಂದ ಮಾಡಲಾದ ವಿಭಾಗ) ಲಾಕ್‌ಡೌನ್‌ನಲ್ಲಿವೆ. ಇವುಗಳಲ್ಲಿ 1.70 ಕೋಟಿ ಜನರು ವಾಸಿಸುವ ಷೆಂಜೆನ್ ನ ಟೆಕ್ ಹಬ್ ಸಹ ಸೇರಿದೆ. ಚೀನಾದ ರಾಷ್ಟ್ರೀಯ ಆರೋಗ್ಯ ಆಯೋಗದ (ಎನ್‌ಎಚ್‌ಸಿ) ಪ್ರಕಾರ, ಇದು ಕಳೆದ ಎರಡು ವರ್ಷಗಳಲ್ಲಿ ಒಂದೇ ದಿನದ ಗರಿಷ್ಠ ಹೆಚ್ಚಳವಾಗಿದೆ. ಜಿಲಿನ್ ಪ್ರಾಂತ್ಯದಲ್ಲಿ ಗರಿಷ್ಠ 3000 ಹೊಸ ಸೋಂಕಿತರು ಪತ್ತೆಯಾಗಿದ್ದಾರೆ ಎಂದು ತಿಳಿಸಿದೆ.
ಸೋಮವಾರ ಎನ್‌ಎಚ್‌ಸಿ ನೀಡಿದ ಮಾಹಿತಿ ಪ್ರಕಾರ 2021ಕ್ಕಿಂತ ಈ ವರ್ಷ ದೇಶದಲ್ಲಿ ಹೆಚ್ಚು ಪ್ರಕರಣಗಳು ದಾಖಲಾಗಿವೆ. 2021 ರಲ್ಲಿ 8,378 ಪ್ರಕರಣಗಳು ದಾಖಲಾಗಿದ್ದವು. ಆದರೆ ಈ ವರ್ಷ 14,000 ಕ್ಕಿಂತ ಹೆಚ್ಚು ಸೋಂಕಿನ ಪ್ರಕರಣಗಳ ದಾಖಲಾಗಿವೆ. 2019ರಲ್ಲಿ ಚೀನಾದ ವುಹಾನ್‌ನಿಂದ ಪ್ರಾರಂಭವಾದ ಕೊರೊನಾ ಸೋಂಕು ಮತ್ತೊಮ್ಮೆ ಡ್ರ್ಯಾಗನ್ ರಾಷ್ಟ್ರವನ್ನು ಭೀತಿಗೊಳಿಸಿದೆ.
ಕಳೆದ ಒಂದು ವಾರದಲ್ಲಿ, ಬೀಜಿಂಗ್, ಶಾಂಘೈ ಸೇರಿದಂತೆ ಗುವಾಂಗ್‌ಡಾಂಗ್, ಜಿಯಾಂಗ್‌ಸು, ಶಾಂಡಾಂಗ್ ಮತ್ತು ಝೆಜಿಯಾಂಗ್ ಪ್ರಾಂತ್ಯಗಳಲ್ಲಿ ಕೋವಿಡ್‌ನ ಹೊಸ ಪ್ರಕರಣಗಳು ವರದಿಯಾಗಿವೆ. ಇದು ಚೀನಾದ ಆರ್ಥಿಕತೆಯ ಮೇಲೆ ಮತ್ತೊಮ್ಮೆ ಗಂಭೀರ ಪರಿಣಾಮ ಬೀರುವ ಸಾಧ್ಯತೆ ಇದೆ.