ಅಂತರರಾಷ್ಟ್ರೀಯ

ಬೀಜಿಂಗ್ ನಲ್ಲಿ ಲಾಕ್ ಡೌನ್ ಭೀತಿ; ಅಗತ್ಯವಸ್ತುಗಳ ಖರೀದಿಗೆ ಕ್ಯೂ ನಿಂತ ಜನ

ಬೀಜಿಂಗ್ ನಲ್ಲಿ ಲಾಕ್ ಡೌನ್ ಭೀತಿ; ಅಗತ್ಯವಸ್ತುಗಳ ಖರೀದಿಗೆ ಕ್ಯೂ ನಿಂತ ಜನ

ಬೀಜಿಂಗ್: ಏಪ್ರಿಲ್ 25: ಚೀನಾದಲ್ಲಿ ಮತ್ತೆ ಕೋವಿಡ್ ತೀವ್ರತೆಯ ಹಿನ್ನೆಲೆಯಲ್ಲಿ ಅಧಿಕಾರಿಗಳು ಸಾಮೂಹಿಕವಾಗಿ ಕೋವಿಡ್ ಪತ್ತೆ ಪರೀಕ್ಷೆಗೆ ಆದೇಶಿಸಿದ್ದಾರೆ. ಈ ಆದೇಶದಿಂದ ದಿಗಿಲಿಗೆ ಬಿದ್ದ ಜನ ಲಾಕ್ ಡೌನ್ ಆಗಿಬಿಡುತ್ತೆ ಎಂದು ಅಂಗಡಿಗಳ ಮುಂದೆ ಅಗತ್ಯ ವಸ್ತುಗಳ ಖರೀದಿಗೆ ಸೋಮವಾರ ಸಾಲುಗಟ್ಟಿ ನಿಂತರು.

ಚೀನಾ ಈಗಾಗಲೇ ತನ್ನ ಅತಿದೊಡ್ಡ ನಗರವಾದ ಶಾಂಘೈನಲ್ಲಿ ಸೋಂಕಿನ ಹೊಡೆತದಿಂದ ತತ್ತರಿಸುತ್ತಿದೆ. ಈಗಾಗಲೇ ಶಾಂಘೈ ನಗರ ಲಾಕ್ ಆಗಿದ್ದು ಸೋಮವಾರ 51 ಕೋವಿಡ್ ಸೋಂಕಿತರ ಸಾವಿನ ವರದಿಯಾಗಿದೆ.

ಮನೆಯಲ್ಲಿ ಬಂಧಿಯಾಗಿರುವವರಿಗೆ ತಾಜಾ ಆಹಾರವನ್ನು ಒದಗಿಸಲು ಶಾಂಘೈ ಹೆಣಗಾಡಿದೆ. ಕೋವಿಡೇತರ ರೋಗಿಗಳು  ವೈದ್ಯಕೀಯ ಆರೈಕೆಯನ್ನು ಪಡೆಯಲು ತೊಂದರೆ ಅನುಭವಿಸುತ್ತಿದ್ದಾರೆ.

ಬೀಜಿಂಗ್ ನಲ್ಲಿ  ಹೆಚ್ಚುತ್ತಿರುವ ಕೋವಿಡ್ ಪ್ರಕರಣಗಳಿಂದ ಲಾಕ್‌ಡೌನ್‌ನ ಭಯ ಕಾಡುತ್ತಿದೆ. ಡೌನ್ ಟೌನ್ ಬೀಜಿಂಗ್‌ನ ಅತಿದೊಡ್ಡ ಜಿಲ್ಲೆ ಚಾಯಾಂಗ್, ಸುಮಾರು 3.5 ಮಿಲಿಯನ್ ಜನರಿಗೆ ನೆಲೆಯಾಗಿದೆ. ಸೋಮವಾರದಿಂದ ನಿವಾಸಿಗಳು ಮತ್ತು ಅಲ್ಲಿ ಕೆಲಸ ಮಾಡಲು ಬರುವವರಿಗೆ ಸಾಮೂಹಿಕ ಪರೀಕ್ಷೆಗೆ ಆದೇಶಿಸಲಾಗಿದೆ

ಆರೋಗ್ಯ ಕಾರ್ಯಕರ್ತರು ಸೋಮವಾರ ಮಾಲ್‌ಗಳು ಮತ್ತು ಕಚೇರಿ ಸಂಕೀರ್ಣಗಳ ಬಳಿ ಕೋವಿಡ್ ಪರಿಕ್ಷಾ ಸ್ಯಾಂಪಲ್ ತೆಗೆದುಕೊಳ್ಳುತ್ತಿದ್ದರಿಂದ ಸುತ್ತಲೂ ಸರತಿ ಸಾಲುಗಳಿದ್ವು. ಸಾಮೂಹಿಕ ಪರೀಕ್ಷಾ ಆದೇಶ ಮತ್ತು ನಗರದಲ್ಲಿ ಕಠಿಣ ಕೋವಿಡ್ ಪರಿಸ್ಥಿತಿಯ ಎಚ್ಚರಿಕೆಗಳಿಂದ ಬೀಜಿಂಗ್‌ನ ಸೂಪರ್‌ಮಾರ್ಕೆಟ್‌ಗಳು ಜನರಿಂದ ತುಂಬಿದ್ವು.

ಸುದ್ದಿ ಓದಿ