ಕಾಂಗ್ರೆಸ್ಸಿನಲ್ಲಿ ಬೆಳೆಯುತ್ತಿದೆ ಭಾವಿ ಮುಖ್ಯಮಂತ್ರಿಗಳ ಪಟ್ಟಿ !
ಅದರಲ್ಲೀಗ ‘ಮುಂದಿನ ಮಹಿಳಾ ಮುಖ್ಯಮಂತ್ರಿ ಉಮಾಶ್ರೀ‘
ರಬಕವಿ-ಬನಹಟ್ಟಿ 26: ಸದ್ಯ ವಿರೋಧ ಪಕ್ಷದಲ್ಲಿರುವ ಕಾಂಗ್ರೆಸ್ ಮುಂದೆ ರಾಜ್ಯದಲ್ಲಿ ಅಧಿಕಾರದ ಗದ್ದುಗೆ ಏರುತ್ತೇವೆ ಎಂಬ ಭಾರಿ ವಿಶ್ವಾಸದಲ್ಲಿರುವ ಅವರ ಅಭಿಮಾನಿಗಳು ನಮ್ಮ ನಾಯಕರೇ ಮುಂದಿನ ಮುಖ್ಯಮಂತ್ರಿಯಾಗಬೇಕೆಂದು ಎಂದು ಆಶಯ ವ್ಯಕ್ತಪಡಿಸುತ್ತಿದ್ದಾರೆ
ಆಡಳಿತ ಪಕ್ಷ ಬಿಜೆಪಿಯಲ್ಲಿ ಪರ್ಯಾಯ ನಾಯಕರ ಕೊರತೆಯಿದ್ದರೆ, ವಿರೋಧ ಪಕ್ಷವಾಗಿರುವ ಕಾಂಗ್ರೆಸ್ನಲ್ಲಿ ನಾಯಕರ ದಂಡೆ ನಿಂತಿದೆ. ಚಾಮರಾಜನಗರದ ಶಾಸಕ ಜಮೀರ ಅಹ್ಮದಖಾನ ಸಿದ್ದರಾಮಯ್ಯ ಮುಂದಿನ ಮುಖ್ಯಮಂತ್ರಿ ಎಂಬ ಹೇಳಿಕೆಯಿಂದ ಕಾಂಗ್ರೆಸ್ನಲ್ಲಿ ನಾನು ಮುಖ್ಯಮಂತ್ರಿ ಸ್ಥಾನದ ಆಕಾಂಕ್ಷಿಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಾ ನಡೆದಿದೆ. ಕಾಂಗ್ರೆಸ್ನ ಕೆಲವು ಮಾಜಿ ಶಾಸಕರು, ಶಾಸಕರು ಸಿದ್ದರಾಮಯ್ಯನವರ ಸಮರ್ಥ ನಾಯಕತ್ವವನ್ನು ಮೆಚ್ಚಿ ಅವರೇ ಮುಂದಿನ ಮುಖ್ಯಮಂತ್ರಿಗಳು ಎಂದು ಅಖಂಡ ಶ್ರೀನಿವಾಸ, ಆರ್.ಬಿ.ತಿಮ್ಮಾರಪೂರ, ರಾಘವೇಂದ್ರ ಹಿಟ್ನಾಳ ಸೇರಿದಂತೆ ಅನೇಕರು ತಮ್ಮ ಅಭಿಪ್ರಾಯ ವ್ಯಕ್ತ ಪಡಿಸಿದರೆ. ಡಿ.ಕೆ.ಶಿವಕುಮಾರ, ಜಿ.ಪರಮೇಶ್ವರ, ರಾಮಲಿಂಗರಡ್ಡಿ ಅವರ ಅಭಿಮಾನಿಗಳು ನಮ್ಮ ನಾಯಕರೇ ಮುಂದಿನ ಸಿ.ಎಂ. ಎಂದು ಹೇಳುತ್ತಿದ್ದಾರೆ. ಮೈಸೂರು ಶಾಸಕ ತನ್ವೀರಸೇಠ ನಾನೂ ಸಿ.ಎಂ. ಆಕ್ಷಾಂಕ್ಷಿ ಎಂದು ಹೇಳಿಕೆ ನೀಡಿದ್ದಾರೆ. ಆದರೆ ಈಗ ತೇರದಾಳ ಕ್ಷೇತ್ರದ ಮಾಜಿ ಶಾಸಕಿ, ಮಾಜಿ ಸಚಿವೆ ಉಮಾಶ್ರೀಯವರು ಕುರಿತು ‘ಮುಂದಿನ ಮಹಿಳಾ ಮುಖ್ಯಮಂತ್ರಿ ಶ್ರೀಮತಿ ಉಮಾಶ್ರೀ ಅಮ್ಮಾ' ಎಂಬ ಪೋಸ್ಟರ್ ಸಾಮಾಜಿಕ ಜಾಲತಾಣಗಳಲ್ಲಿ ತುಂಬಾ ವೈರಲ್ ಆಗುತ್ತಿದೆ.
ಕ್ಷೇತ್ರದ ಅನೇಕ ಕಾಂಗ್ರೆಸ್ ಕಾರ್ಯಕರ್ತರ ಹೆಸರಿನ ಸಾಮಾಜಿಕ ಜಾಲತಾಣಗಳಲ್ಲಿ ಮುಂದಿನ ಮಹಿಳಾ ಮುಖ್ಯಮಂತ್ರಿ ಉಮಾಶ್ರೀ ಎಂಬ ಪೋಸ್ಟ್ ಕ್ಷೇತ್ರದಲ್ಲಿ ಬಹು ಸಂಚಲನ ಸೃಷ್ಠಿಮಾಡಿದೆ. ಸಿದ್ದರಾಮಯ್ಯನವರ ಸರಕಾರದಲ್ಲಿ ನೀಡಿದ ಮಂತ್ರಿ ಸ್ಥಾನದ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸಿರುವ ಉಮಾಶ್ರೀಯವರು, ಹೆಚ್ಚಿನ ಅನುದಾನ ತಂದು, ಕ್ಷೇತ್ರವನ್ನು ಮಾದರಿ ಕ್ಷೇತ್ರವನ್ನಾಗಿ ಮಾಡಿದ್ದಾರೆ. ಬಡ ಜನರ ಆಶಾಕಿರಣವಾದವರು ಮುಖ್ಯಮಂತ್ರಿ ಸ್ಥಾನದ ಯೋಗ್ಯ ಅಭ್ಯರ್ಥಿಯೆಂದು ಅವರ ಅಭಿಮಾನಿಗಳ ಅಂಬೋಣವಾಗಿದೆ. ಚುನಾವಣೆಗೆ ಇನ್ನೂ ಎರಡು ವರ್ಷಗಳ ಅವಧಿಯಿರುವುದರಿಂದ ಇನ್ನೂ ಅನೇಕ ನಾಯಕರು ಮುಖ್ಯಮಂತ್ರಿ ಕುರ್ಚಿ ಕಾಣುತ್ತಿರಬಹುದು.