ಖಾನಾಪೂರ ಅಬಕಾರಿ ಅಧಿಕಾರಿಗಳ ಮಿಂಚಿನ ಕಾರ್ಯಾಚರಣೆ : ಅಕ್ರಮವಾಗಿ ಸಾಗಿಸುತ್ತಿದ್ದ 67.73 ಲಕ್ಷದ ಗೋವಾ ಮದ್ಯ ವಶ : ಓರ್ವನ ಬಂಧನ, ಲಾರಿ ಜಪ್ತಿ
ಬೆಳಗಾವಿ : ಲಾರಿಯೊಂದರಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ 67.73 ಲಕ್ಷದ ಮೌಲ್ಯದ 3905.28 ಲೀಟರ್ ಗೋವಾ ರಾಜ್ಯದ ಮದ್ಯ ವಶಪಡಿಸಿಕೊಂಡಿರುವ ಖಾನಾಪುರ ಅಬಕಾರಿ ಅಧಿಕಾರಿಗಳು ಅಕ್ರಮ ಮದ್ಯ ಸಾಗಾಟದಲ್ಲಿ ತೊಡಗಿದ್ದ ಓರ್ವನನ್ನು ಬಂಧಿಸಿ, ಮದ್ಯ ತುಂಬಿದ್ದ ಲಾರಿಯನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
ಬೆಳಗಾವಿ ಅಬಕಾರಿ ಅಪರ ಆಯುಕ್ತ (ಅಪರಾಧ), ಕೇಂದ್ರಸ್ಥಾನದ ಡಾ. ವೈ. ಮಂಜುನಾಥ ಹಾಗೂ ಅಬಕಾರಿ ಜಂಟಿ ಆಯುಕ್ತ ಬೆಳಗಾವಿ ವಿಭಾಗದ ಪಿರೋಜ್ ಖಾನ್ ಖಿಲ್ಲೇದಾರ ಇವರ ಆದೇಶದಂತೆ ಕು. ಎಂ. ವನಜಾಕ್ಷಿ, ಅಬಕಾರಿ ಉಪ ಆಯುಕ್ತರು, ಬೆಳಗಾವಿ (ದಕ್ಷಿಣ) ಜಿಲ್ಲೆ, ರವಿ ಮುರಗೋಡ, ಅಬಕಾರಿ ಉಪ ಅಧೀಕ್ಷಕರು, ಬೆಳಗಾವಿ ಉಪ ವಿಭಾಗ ಇವರ ಮಾರ್ಗದರ್ಶನದಂತೆ ಬರುವ ಕರ್ನಾಟಕ ವಿಧಾನಸಭೆ ಚುನಾವಣೆ 2023ರ ನಿಮಿತ್ಯ ಅಬಕಾರಿ ಅಕ್ರಮಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಖಾನಾಪೂರ ವಲಯ ವ್ಯಾಪ್ತಿಯ ಜಾಂಬೋಟಿ- ಖಾನಾಪೂರ ಎಸ್.ಎಚ್-31 ರಸ್ತೆಯ ಮೋದೆಕೊಪ್ಪ ಕ್ರಾಸ್ ಹತ್ತಿರ ಗಸ್ತು ತಿರುಗುತ್ತಿದ್ದರು.
ದಿ. 7ರಂದು ಖಚಿತ ಮಾಹಿತಿ ಮೇರೆಗೆ ಮದ್ಯಾಹ್ನ 2.5 ಗಂಟೆಗೆ ಅಬಕಾರಿ ನಿರೀಕ್ಷಕರಾದ ದಾವಲಸಾಬ ಶಿಂದೋಗಿ, ಅಬಕಾರಿ ಉಪ ನಿರೀಕ್ಷಕರಾದ ಜಯರಾಮ ಹೆಗಡೆ ಮತ್ತು ಸಿಬ್ಬಂದಿಗಳಾದ ಮಂಜುನಾಥ ಬಳಗಪ್ಪನವರ, ಪ್ರಕಾಶ ಡೋಣಿ ಇವರು ರಸ್ತೆಗಾವಲು ಮಾಡುವ ಸಂದರ್ಭದಲ್ಲಿ ಒಂದು ಭಾರತ ಬೆಂಜ್ ಕಂಪನಿಯ 12 ಚಕ್ರದ ಕಂಟೆನರ್ ವಾಹನ ಸಂಖ್ಯೆ: ಜಿಜೆ-10/ಟಿಟಿ-8276 ಅನ್ನು ತಪಾಸಣೆ ನಡೆಸಿದಾಗ ಗೋವಾ ರಾಜ್ಯದಲ್ಲಿ ಮಾತ್ರ ಮಾರಾಟ ಕ್ಕಿರುವ 180 ಎಮ್. ಎಲ್. ತುಂಬಿದ್ದ 21696 (ಒಟ್ಟು 3905.28 ಲೀ. ಗೋವಾ ಮದ್ಯ) ಸುಮಾರು 67,73,120 ಮೌಲ್ಯದ ಇಂಪಿರಿಯಲ್ ಬ್ಲ್ಯೂ ವಿಸ್ಕಿ ಬಾಟಲಿಗಳು ಪತ್ತೆಯಾಗಿವೆ.
ಈ ಅಕ್ರಮ ಮದ್ಯ ಸಾಗಾಟ ಪ್ರಕರಣ ವನ್ನು ಖಾನಾಪೂರ ವಲಯದ ಅಬಕಾರಿ ನಿರೀಕ್ಷಕ ದಾವಲಸಾಬ ಶಿಂದೋಗಿ ಅವರು ಜಪ್ತು ಮಾಡಿಕೊಂಡು ಈ ಸಾಗಾಟದಲ್ಲಿ ತೋಡಗಿದ್ದ ಆರೋಪಿತನನ್ನು ವಶಕ್ಕೆ ಪಡೆಯಲಾಗಿದೆ.
ಗುನ್ನೆ ಸಂಖ್ಯೆ: 17/2022-23, ದಿ. 07/03/2023 ರಡಿಯಲ್ಲಿ ಪ್ರಕರಣವನ್ನು ದಾಖಲಿಸಿಕೊಂಡು ನ್ಯಾಯಾಲಯಕ್ಕೆ ಪ್ರಥಮ ವರ್ತಮಾನ ವರದಿಯನ್ನು ಸಲ್ಲಿಸಲಾಗಿರುತ್ತದೆ. ಖಾನಾಪೂರ ಅಬಕಾರಿ ಅಧಿಕಾರಿಗಳ ಈ ಕಾರ್ಯಾಚರಣೆಗೆ ಅಬಕಾರಿ ಇಲಾಖೆಯ ಮೇಲಾಧಿಕಾರಿಗಳು ಮೆಚ್ವುಗೆ ವ್ಯಕ್ತಪಡಿಸಿ ಅಭಿನಂದಿಸಿದ್ದಾರೆ.