ಭಾರತದಲ್ಲಿ ಸಾಂಪ್ರದಾಯಿಕ ಜಾಗತಿಕ ಔಷಧಿ ಕೇಂದ್ರ ಆರಂಭ: ಟೆಡ್ರೋಸ್
ವಾಷಿಂಗ್ಟನ್, ನವೆಂಬರ್ 13: ಭಾರತದಲ್ಲಿ ಸಾಂಪ್ರದಾಯಿಕ ಔಷಧಿ ಕೇಂದ್ರ ಆರಂಭಿಸಲು ವಿಶ್ವ ಆರೋಗ್ಯ ಸಂಸ್ಥೆ ತೀರ್ಮಾನಿಸಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆಯ ಡೈರೆಕ್ಟರ್ ಜನರಲ್ ಟೆಡ್ರೋಸ್ ಅಧನೊಮ್ ಹೇಳಿದ್ದಾರೆ.
ಜೈಪುರ ಹಾಗೂ ಜಾಮ್ ನಗರಲದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಉದ್ಘಾಟಿಸಿದ ಆಯುರ್ವೇದ ಸಂಸ್ಥೆಗಳ ಕುರಿತು ಅವರು ಮಾತನಾಡಿ, ಭಾರತದಲ್ಲಿ ಸಾಂಪ್ರದಾಯಿಕ ಔಷಧಕ್ಕಾಗಿ ಜಾಗತಿಕ ಕೇಂದ್ರವನ್ನು ಸ್ಥಾಪಿಸಲು ನಿರ್ಧರಿಸಲಾಗಿದೆ.
ನರೇಂದ್ರ ಮೋದಿಯವರು ದೇಶವನ್ನು ವಿಶ್ವದ ಔಷಧಾಲಯವಾಗಿ ಹೊರಹೊಮ್ಮಿಸಿದಂತೆಯೇ ವಿಶ್ವ ಆರೋಗ್ಯ ಸಂಸ್ಥೆ ಜಾಗತಿಕ ಸ್ವಾಸ್ಥ್ಯದ ಕೇಂದ್ರವಾಗಲಿದೆ ಎಂದರು.
ಜೈಪುರ ಹಾಗೂ ಜಾಮ್ ನಗರದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಸಿದ್ಧವಾಗಿರುವ ಎರಡು ಆಯುರ್ವೇದ ಸಂಸ್ಥೆಗಳನ್ನು ಉದ್ಘಾಟಿಸಿದರು, ಅದೇ ಕಾರ್ಯಕ್ರಮದಲ್ಲಿ ಟೆಡ್ರೋಸ್ ಈ ವಿಷಯ ತಿಳಿಸಿದರು.
ಇನ್ನು ಕರ್ನಾಟಕದಲ್ಲಿ ಈಗಿರುವ ಜನೌಷಧಿ ಕೇಂದ್ರಗಳಲ್ಲಿ ಮುಂದಿನ ದಿನಗಳಲ್ಲಿ ಆಯುರ್ವೇದ ಔಷಧ ದೊರೆಯುವಂತೆ ಮಾಡಲಾಗುವುದು ಎನ್ನುವ ಮಾತುಗಳು ಕೇಳಿಬರುತ್ತಿದೆ.
ಆಯುರ್ವೇದವು ಭಾರತದ ಪರಂಪರೆಯಾಗಿದ್ದು, ಇದರ ವಿಸ್ತರಣೆ ಮಾಡುವುದರಿಂದ ಜನರಿಗೆ ಸಾಕಷ್ಟು ಪ್ರಯೋಜನವಾಗಲಿದೆ. ಸಾಂಪ್ರದಾಯಿಕ ಔಷಧಿಗಳಿಗಾಗಿ ಜಾಗತಿಕ ಕೇಂದ್ರವನ್ನು ಸ್ಥಾಪಿಸಲು ವಿಶ್ವ ಆರೋಗ್ಯ ಸಂಸ್ಥೆ ಭಾರತವನ್ನು ಆಯ್ಕೆ ಮಾಡಿಕೊಂಡಿರುವುದು ಹೆಮ್ಮೆ ವಿಷಯವಾಗಿದೆ ಎಂದು ಪ್ರಧಾನಿ ಮೋದಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.