ಚಿನ್ನ ತೆಗೆಯುವಾಗ ಭೂಕುಸಿತ: ಬೊಲಿವಿಯಾದಲ್ಲಿ ಐವರ ಸಾವು
ಸುಕ್ರಾ/ಬೊಲಿವಿಯಾ: ಮೇ 27 : ಮಧ್ಯ ಬೊಲಿವಿಯಾದ ನದಿಯ ದಡದಲ್ಲಿ ಚಿನ್ನ ತೆಗೆಯುವ ಕೆಲಸ ಮಾಡುತ್ತಿದ್ದ ಐವರು ಕಾರ್ಮಿಕರು ಹಠಾತ್ ಭೂಕುಸಿತದಿಂದಾಗಿ ಸಾವಿಗೀಡಾಗಿದ್ದಾರೆ. ಸ್ಥಳೀಯ ಆಡಳಿತಾಧಿಕಾರಿಗಳು ಈ ಬಗ್ಗೆ ಮಾಹಿತಿ ನೀಡಿದ್ದಾರೆ.
ಪೊಲೀಸ್ ವರದಿಯ ಪ್ರಕಾರ, ಮೃತರು 20 ರಿಂದ 40 ವರ್ಷ ವಯಸ್ಸಿನವರಾಗಿದ್ದು, ಕೇಂದ್ರ ಕೊಚಬಾಂಬಾ ಇಲಾಖೆಯ ಕೊಕಪಾಟಾ ಪಟ್ಟಣದ ಹುವಾಜ್‌ಚಾಮಾಯು ಸಮುದಾಯಕ್ಕೆ ಸೇರಿದವರಾಗಿದ್ದಾರೆ ಎಂದು ತಿಳಿಸಿದೆ.
ಪ್ರಾದೇಶಿಕ ಪೊಲೀಸ್ ಕಮಾಂಡರ್, “ಬುಧವಾರ ಈ ದುರಂತ ಸಂಭವಿಸಿದೆ. ಫಲ್ಸುರಿ ಆರೋಗ್ಯ ಕೇಂದ್ರದ ವೈದ್ಯರಿಗೆ ಬುಧವಾರ ತಡರಾತ್ರಿ ಈ ಬಗ್ಗೆ ಮಾಹಿತಿ ದೊರೆಯಿತು. ತಕ್ಷಣ ಅವರು ಪೊಲೀಸರೊಂದಿಗೆ ಸ್ಥಳಕ್ಕೆ ಆಗಮಿಸಿದರು, ಅಲ್ಲಿ ಗಾಯಾಳುಗಳನ್ನು ಪರೀಕ್ಷೆ ನಡೆಸಿದ ವೈದ್ಯರು ಮೃತಪಟ್ಟಿದ್ದಾರೆ ಎಂದು ವರದಿ ನೀಡಿದ್ದಾರೆ” ಎಂದು ಪೊಲೀಸ್ ಕಮಾಂಡರ್ ಮಾಹಿತಿ ನೀಡಿದರು.
ಇದೇ ವೇಳೆ ಮಾತನಾಡಿದ ಕೊಚಬಾಂಬಾ ಸರ್ಕಾರದ ಗಣಿಗಾರಿಕೆ ಕಾರ್ಯದರ್ಶಿ ಎಲುಟೆರಿಯೊ ಗಲಿಂಡೋ, “ಗುರುವಾರ ಮುಂಜಾನೆ ಅವಶೇಷಗಳಡಿ ಸಿಲುಕಿದ್ದ ಮೃತದೇಹಗಳನ್ನು ಹೊರತೆಗೆಯಲಾಯಿತು. ಭೂಕುಸಿತ ಸಂಭವಿಸಿದಾಗ ಇತರ ಕೆಲವು ಗಣಿಗಾರರು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಅವರು ಹೇಳಿದರು.