ಅಂತರರಾಷ್ಟ್ರೀಯ

ಕೀನ್ಯಾ ; ದೇಸೀ ತಳಿ ಬೀಜ ಹಂಚಿಕೆಯೀಗ ಅಪರಾಧ !

ಕೀನ್ಯಾ ; ದೇಸೀ ತಳಿ ಬೀಜ ಹಂಚಿಕೆಯೀಗ ಅಪರಾಧ !

ಕೀನ್ಯಾ: ಏಪ್ರಿಲ್‌ ೧೪ : ಇಲ್ಲಿನ ಸರ್ಕಾರ ತನ್ನ ದೇಶದಲ್ಲಿ ದೇಸೀ ತಳಿಗಳ ಬೀಜ ಹಂಚಿಕೆ ಮೇಲೆ ನಿರ್ಬಂಧ ಹೇರುವ ಕಾನೂನನ್ನು ಸದ್ದಿಲ್ಲದೇ ಜಾರಿಗೆ ತಂದಿದೆ. ಇದು  ರೈತರು ಪರಸ್ಪರ ದೇಸೀತಳಿ ಬೀಜ ವಿನಿಮಯ ಮಾಡಿಕೊಳ್ಳುವುದನ್ನು ಅಪರಾಧೀಕರಣ ಮಾಡಿದೆ ಎಂಬ ಭಾರಿ ಟೀಕೆ ವ್ಯಕ್ತವಾಗಿದೆ.

ಈ ಕಾನೂನು ಜಾರಿಯಿಂದಾಗಿ ಸರ್ಕಾರ ನಿಗದಿಪಡಿಸಿದ ಸಂಸ್ಥೆಗಳು ಪ್ರಾಮಾಣೀಕರಿಸಿದ ಬೀಜಗಳನ್ನು ಮಾತ್ರ ಮಾರಾಟ- ವಿನಿಮಯ ಮಾಡಿಕೊಳ್ಳಬಹುದು. ಇದಕ್ಕೆ ತಪ್ಪಿ ದೇಸೀ ತಳಿಗಳ ಬೀಜ ಮಾರಾಟ ಮಾಡಿದರೆ ಭಾರಿ ಮೊತ್ತದ ದಂಡ ಅಥವಾ ಜೈಲು ಶಿಕ್ಷೆ ಅಥವಾ ಇವೆರಡೂ ಶಿಕ್ಷೆಗೆ ಒಳಗಾಗಬೇಕಾಗುತ್ತದೆ ಎಂದು ಹೊಸ ಕಾನೂನು ಹೇಳುತ್ತದೆ.

ಈ ಅಂಶ ಕೀನ್ಯಾ  ಇತ್ತೀಚೆಗೆ ಜಾರಿಗೆ ತಂದ ಬೀಜಗಳು ಮತ್ತು ಸಸ್ಯ ಪ್ರಭೇದಗಳ ಕಾಯಿದೆ 2012 ರ ಪ್ರಕಾರ, ಭಾಗ 2(8) ಸೂಚ್ಯಂಕವಿಲ್ಲದ ಸಸ್ಯ ಪ್ರಭೇದಗಳ ಬೀಜಗಳ ಮಾರಾಟದ ಮೇಲಿನ ನಿರ್ಬಂಧಗಳ ಕಾನೂನಿನಲ್ಲಿದೆ.

ಕೀನ್ಯಾ ಸರ್ಕಾರವು ಪರಿಚಯಿಸಿದ ಈ ಹೊಸ ಕಾನೂನು  ಅಲ್ಲಿನ ರೈತರು ಸಾವಿರಾರು ವರ್ಷಗಳಿದ ಅನುಸರಿಸಕೊಂಡು ಬಂದ ಅನೌಪಚಾರಿಕ ಬೀಜ ವ್ಯವಸ್ಥೆಯ ಮೇಲೆ ನಿರ್ಬಂಧಗಳನ್ನು ಹೇರಿದೆ, ದೇಶದಲ್ಲಿ ಮಾರಾಟವಾಗುವ ಅಥವಾ ವಿತರಿಸಲಾದ ಎಲ್ಲಾ ಬೀಜಗಳನ್ನು ಪ್ರಮಾಣೀಕರಿಸಲಾಗಿದೆ ಎಂದು ಖಚಿತಪಡಿಸಿಕೊಳ್ಳಲು. ಸರ್ಕಾರಿ ಸಂಸ್ಥೆಗಳಿಗೆ ಸೂಚಿಸಲಾಗಿದೆ.

ತಾಂತ್ರಿಕವಾಗಿ ಹೇಳುವುದಾದರೆ , ಕೀನ್ಯಾದ ಬೀಜ ಮತ್ತು ಸಸ್ಯ ಪ್ರಭೇದಗಳ ಕಾಯಿದೆಯು ಸ್ಥಳೀಯ ಬೀಜಗಳ ಮಾರಾಟ ಅಥವಾ ಹಂಚಿಕೆಯನ್ನು ಅಪರಾಧೀಕರಿಸುತ್ತದೆ. ತಪ್ಪಿತಸ್ಥರು 6 ತಿಂಗಳ ಜೈಲು ಶಿಕ್ಷೆ ಅಥವಾ Sh20,000 ದಂಡ ಅಥವಾ ಎರಡನ್ನೂ ವಿಧಿಸಬಹುದು.

ಇದೇ ಸಂದರ್ಭದಲ್ಲಿ ಕೀನ್ಯಾದ ನೆರೆಯ ದೇಶಗಳಾದ ತಾಂಜಾನಿಯಾ ಮತ್ತು ಉಗಾಂಡಾದಲ್ಲಿ ದೇಸೀ  ತಳಿಗಳ ಬೀಜ ಹಂಚಿಕೆ- ವಿನಿಮಯ ಮಾರಾಟದ ಮೇಲೆ ಯಾವುದೇ ನಿರ್ಬಂಧವಿಲ್ಲ.  ಇಲ್ಲಿಯ ರೈತರು,  ತಮ್ಮ ಇಚ್ಛೆಯಂತೆ ಬೀಜಗಳನ್ನು ಮಾರಾಟ ಮಾಡಲು ಅಥವಾ ಹಂಚಿಕೊಳ್ಳಲು ಮುಕ್ತರಾಗಿದ್ದಾರೆ.

ಕೀನ್ಯಾ ಜಾರಿಗೆ ತಂದಿರುವ ಈ ನಿರ್ಬಂಧಕ್ಕೆ ಆಂತರಿಕವಾಗಿ ಭಾರಿ ವಿರೋಧ ವ್ಯಕ್ತವಾಗಿದೆ. ಇಂಥ ಮಸೂದೆಗಳು ಹೆಚ್ಚು ಚರ್ಚೆಯಿಲ್ಲದೇ ಸಂಸತ್ತಿನಲ್ಲಿ ಹೇಗೆ ಅಂಗೀಕಾರವಾಗುತ್ತವೆ ಎಂದು ಅಲ್ಲಿನ ಕೃಷಿಕರು ಪ್ರಶ್ನಿಸುತ್ತಿದ್ದಾರೆ.

ಕೃಷಿಯಲ್ಲಿ ಹೊಸ ಸುಧಾರಿತ ತಂತ್ರಜ್ಞಾನಗಳನ್ನು  ಬಳಸುವ ಹೆಸರಿನಲ್ಲಿ ಇಂಥ ಮಾರಕ ಕಾನೂನುಗಳನ್ನು ಜಾರಿಗೆ ತರಲಾಗುತ್ತಿದೆ. ಇದರಿಂದ ಬಹುರಾಷ್ಟ್ರೀಯ ಕಂಪನಿಗಳು ಉತ್ಪಾದಿಸುವ ಬೀಜಗಳ ಮಾರಾಟಕ್ಕೆ ಅನುಕೂಲ ಮಾಡಿಕೊಡುವ ಉದ್ದೇಶವಿದೆ ಎಂದು ಹೇಳಲಾಗಿದೆ.

ಈ ಹೊಸ ಕಾನೂನಿನಿಂದ ಸರ್ಕಾರದಿಂದ ಅನುಮತಿ ಪಡೆದ ಬಹುರಾಷ್ಟ್ರೀಯ ಕಂಪನಿಗಳು ಉತ್ಪಾದಿಸಿದ ಬೀಜಗಳನ್ನೇ ಖರೀದಿಸಬೇಕು. ಮಾರಾಟ ಮಾಡಬೇಕು. ರೈತ ತನ್ನ ಹೊಲದಲ್ಲಿ ಬೆಳೆಯ ಬೀಜವನ್ನು ಮುಂದಿನ ಹಂಗಾಮಿಗೆ ಬಳಸಲು ಆಗದಂಥ ನಿರ್ಬಂಧವನ್ನು ಕಾನೂನು ಹೇರಿದೆ.

ಒಂದು ವೇಳೆ ರೈತರು ಕಾನೂನು ಉಲ್ಲಂಘಿಸಿ ದೇಸೀ ತಳಿಗಳ ಬಿತ್ತನೆ ಬೀಜಗಳನ್ನು ಬಳಸಿದರೆ ವಿನಿಮಯ ಮಾಡಿಕೊಂಡರೆ ಸರ್ಕಾರ ಅವರ ಮೇಲೆ ಮೊಕದ್ದಮೆಗಳನ್ನು ಹೂಡುತ್ತದೆ. ಇದರಿಂದ ರೈತರು ಪ್ರತಿ ಋತುವಿನಲ್ಲಿ ಬಿತ್ತನೆ ಬೀಜಗಳನ್ನು ಖರೀದಿಸಿಯೇ ಕೃಷಿ ಮಾಡಬೇಕಾದ ದುಸ್ಥಿತಿ ನಿರ್ಮಾಣವಾಗಿದೆ.  ಬೀಜ ಕಂಪನಿಗಳಗೆ ಬೃಹತ್‌ ಮಾರುಕಟ್ಟೆ ಸೃಷ್ಟಿಸುವ ಸಲುವಾಗಿಯೇ ಕಾನೂನು ರಚಿಸಲಾಗಿದೆ ಎನ್ನಲಾಗಿದೆ.

ಸುದ್ದಿ ಓದಿ