ಟೋಕಿಯೋ ಪ್ಯಾರಾಲಿಂಪಿಕ್ಸ್: ಕನ್ನಡಿಗ ಸುಹಾಸ್ ಗೆ ಬೆಳ್ಳಿ
ಟೋಕಿಯೋ, ಸೆ.5: ಭಾರತದ ಪ್ಯಾರಾ ಬ್ಯಾಡ್ಮಿಂಟನ್ ಆಟಗಾರ ಸುಹಾಸ್ ಯತಿರಾಜ್ ಅವರು ಇಲ್ಲಿ ನಡೆದಿರುವ ಪ್ಯಾರಾಲಿಂಪಿಕ್ಸ್ ಕ್ರೀಡಾ ಕೂಟದ ಎಸ್ಎಲ್ 4 ವಿಭಾಗದ ಫೈನಲ್ ನಲ್ಲಿ ಸೋತು, ಬೆಳ್ಳಿ ಪದಕ ತಮ್ಮದಾಗಿಸಿಕೊಂಡಿದ್ದಾರೆ.
ಭಾನುವಾರ ನಡೆದ ಪುರುಷರ ಸಿಂಗಲ್ಸ್ ಬ್ಯಾಡ್ಮಿಂಟನ್ ಸ್ಪರ್ಧೆಯಲ್ಲಿ ಕನ್ನಡಿಗ ಸುಹಾಸ್ 21-15, 17-21, 15-21 ರಿಂದ ಎರಡು ಬಾರಿ ವಿಶ್ವ ಚಾಂಪಿಯನ್ ಲ್ಯೂಕಾಸ್ ಮಜೂರ್ ವಿರುದ್ಧ 62 ನಿಮಿಷಗಳ ಕಾದಾಟದಲ್ಲಿ ನಿರಾಸೆ ಅನುಭವಿಸಿದರು.
38 ವರ್ಷದ ಸುಹಾಸ್ ಅವರು ಸದ್ಯ ಗೌತಮ್ ಬುದ್ಧ ನಗರ (ನೋಯ್ಡಾ)ದ ಜಿಲ್ಲಾಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಅವರು ಪ್ಯಾರಾಲಿಂಪಿಕ್ಸ್ ನಲ್ಲಿ ಮೊದಲ ಪದಕ ಗೆದ್ದ ಮೊದಲ ಐಎಎಸ್ ಅಧಿಕಾರಿ ಎಂಬ ಹೆಗ್ಗಳಿಕೆಗೆ ಪಾತ್ರರಾದರು.
ಈ ಪದಕದ ಬಲದಿಂದ ಭಾರತ ಈ ಕ್ರೀಡಾ ಕೂಟದಲ್ಲಿ ಒಟ್ಟು 4 ಬಂಗಾರ, 8 ಬೆಳ್ಳಿ, 6 ಕಂಚಿನ ಪದಕಗಳೊಂದಿಗೆ 18 ಪದಕಗಳನ್ನು ಬಾಚಿಕೊಂಡಿದೆ.
ಪುರುಷರ ಸಿಂಗಲ್ಸ್ ಎಸ್ ಎಲ್ 4 ಕಂಚಿನ ಪದಕದ ಸ್ಪರ್ಧೆಯಲ್ಲಿ ಭಾರತದ ತರುಣ್ ಧಿಲ್ಲನ್ 17-21, 11-21ರಿಂದ ಇಂಡೋನೇಷ್ಯಾದ ಫ್ರೆಡಿ ಸೆಟಿಯಾವಾನ್ ವಿರುದ್ಧ ಸೋತರು.