ಅಂತರರಾಷ್ಟ್ರೀಯ

ಕಾಬೂಲ್ ವಿವಿ ದಾಳಿಯ ಮಾಸ್ಟರ್ ಮೈಂಡ್‍ ಬಂಧನ

ಕಾಬೂಲ್ ವಿವಿ ದಾಳಿಯ ಮಾಸ್ಟರ್ ಮೈಂಡ್‍ ಬಂಧನ

ಕಾಬೂಲ್, 14: ಕನಿಷ್ಠ 22 ಜನರ ಸಾವಿಗೆ ಕಾರಣವಾದ  ಕಾಬೂಲ್ ವಿಶ್ವವಿದ್ಯಾಲಯದ ಮೇಲೆ ನಡೆದ ಮಾರಣಾಂತಿಕ ದಾಳಿಯ ಹಿಂದಿನ ಸೂತ್ರಧಾರಿಯನ್ನು ಅಫಘಾನ್ ಪಡೆಗಳು ಬಂಧಿಸಿವೆ ಎಂದು ಅಫ್ಘಾನಿಸ್ತಾನದ ಮೊದಲ ಉಪಾಧ್ಯಕ್ಷ ಅಮರುಲ್ಲಾ ಸಲೇಹ್ ಶನಿವಾರ ಹೇಳಿದ್ದಾರೆ. 

ಶಂಕಿತ ಆದಿಲ್ ಪಂಜಶೀರ್ ಪ್ರಾಂತ್ಯದ ನಿವಾಸಿಯಾಗಿದ್ದು, ಹಕ್ಕಾನಿ ನೆಟ್‌ವರ್ಕ್‌ನ ಭಾಗವಾಗಿದ್ದ ಎಂದು ಸಲೇಹ್ ಫೇಸ್‌ಬುಕ್ ಪೋಸ್ಟ್ ಮೂಲಕ ಮಾಹಿತಿ ನೀಡಿದ್ದಾರೆ. 

ವಿವಿ ಮೇಲಿನ ದಾಳಿಗಾಗಿ ಖೋಸ್ಟ್ ಪ್ರಾಂತ್ಯದ ಹಕ್ಕಾನಿ ನೆಟ್‌ವರ್ಕ್‌ನಿಂದ  ಶಸ್ತ್ರಾಸ್ತ್ರಗಳನ್ನು ಪಡೆದಿರುವುದಾಗಿ ಆದಿಲ್ ಒಪ್ಪಿಕೊಂಡಿದ್ದಾನೆ. ಆದಿಲ್ ಅವರ ಕುಟುಂಬವು ಕಾಬೂಲ್‌ನ ಪುಲ್-ಎ-ಚಾರ್ಖಿ ಪ್ರದೇಶದಲ್ಲಿ ವಾಸಿಸುತ್ತಿದ್ದು, ಕಳೆದ ಮೂರು ವರ್ಷಗಳಿಂದ ನಾಪತ್ತೆಯಾಗಿದ್ದರು  ಎಂದು ಅವರ ನೆರೆಹೊರೆಯವರು ಹೇಳಿದ್ದಾರೆ. "ಅಧ್ಯಯನ ಮತ್ತು ಯುದ್ಧ"ಕ್ಕಾಗಿ ಅವರು ವಿದೇಶಕ್ಕೆ ಹೋಗಿದ್ದಾರೆ ಎಂಬ ವದಂತಿಗಳಿವೆ ಎಂದು ಸಲೇಹ್ ಹೇಳಿದ್ದಾರೆ. 

ಈ ದಾಳಿಗಾಗಿ ಅಮರುಲ್ಲಾ ಸಲೇಹ್ ಅವರು ತಾಲಿಬಾನ್ ಅನ್ನು ದೂಷಿಸಿದ್ದಾರೆ. ಆದರೆ ತಾಲಿಬಾನ್ ದಾಳಿಯಲ್ಲಿ ಭಾಗಿಯಾಗಿರುವುದನ್ನು ನಿರಾಕರಿಸಿದೆ. ದಾಳಿಯಲ್ಲಿ 22 ಜನರ ಸಾವಿನ ಹೊರತಾಗಿ, 40 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು.

ಸುದ್ದಿ ಓದಿ