ಕಾಬೂಲ್: ಐಸಿಸ್ ದಾಳಿಯ ಬಗ್ಗೆ ಅಮೆರಿಕ ತೀವ್ರ ನಿಗಾ
ವಾಷಿಂಗ್ಟನ್/ಕಾಬೂಲ್, ಆಗಸ್ಟ್ 27 ತಾಲಿಬಾನ್ ಹಿಡಿತದಲ್ಲಿರುವ ಅಫಘಾನಿಸ್ತಾನದ ಕಾಬುಲ್ ನಿಂದ ಅಮೆರಿಕ ಸ್ಥಳಾಂತರಿಸುವಿಕೆ ಮುಂದುವರಿಸಿದೆ. ಅಂತೆಯೇ ಕಾಬೂಲ್ ವಿಮಾನ ನಿಲ್ದಾಣವನ್ನು ಗುರಿಯಾಗಿಸಿಕೊಂಡು ರಾಕೆಟ್‌ಗಳು ಅಥವಾ ವಾಹನದಿಂದ ಬಾಂಬ್‌ಗಳನ್ನು ಒಳಗೊಂಡಂತೆ ಇಸ್ಲಾಮಿಕ್ ಸ್ಟೇಟ್ ಉಗ್ರ ಸಂಘಟನೆಯ ಸಂಭವನೀಯ ದಾಳಿಗಳ ಕುರಿತು ಕಮಾಂಡರ್‌ಗಳು ತೀವ್ರ ನಿಗಾ ವಹಿಸಿದ್ದಾರೆ ಎಂದು ಅಮೆರಿಕ ಸೆಂಟ್ರಲ್ ಕಮಾಂಡ್ ಜನರಲ್ ಫ್ರಾಂಕ್ ಮೆಕೆಂಜಿ ಹೇಳಿದ್ದಾರೆ. ಅಫ್ಘಾನಿಸ್ತಾನದಿಂದ ತಮ್ಮ ವಾಪಸಾತಿಯನ್ನು ಪೂರ್ಣಗೊಳಿಸಲು ಅಮೆರಿಕ ಪಡೆ ಕಾರ್ಯನಿರ್ವಹಿಸುತ್ತಿದ್ದು, "ನಾವು ನಮ್ಮಿಂದ ಸಾಧ್ಯವಿರುವ ಎಲ್ಲವನ್ನೂ ಮಾಡುತ್ತಿದ್ದೇವೆ" ಎಂದು ಜನರಲ್ ಮೆಕೆಂಜಿ ಹೇಳಿದರು.
ತಾಲಿಬಾನ್‌ನೊಂದಿಗೆ ಒಪ್ಪದ ಮಾಡಿಕೊಂಡಂತೆ ಇದೇ ತಿಂಗಳ 31ರ ಗಡುವಿನೊಳಗೆ ಸೇನೆಯನ್ನು ಸಂಪೂರ್ಣ ಹಿಂಪಡೆಯಲು ಅಮೆರಿಕ ಯತ್ನಿಸುತ್ತಿದೆ.
ಅಧ್ಯಕ್ಷ ಜೋ ಬಿಡೆನ್ ಈ ಗಡುವನ್ನು ವಿಸ್ತರಿಸಿಲ್ಲ. ಗುರುವಾರ ಸಂಜೆ ಅವರು ದಾಳಿಗಳ ಹೊರತಾಗಿಯೂ ಸ್ಥಳಾಂತರಿಸುವ ಪ್ರಯತ್ನ ಮುಂದುವರಿಯುತ್ತದೆ ಎಂದು ಹೇಳಿದ್ದಾರೆ. ದಾಳಿಕೋರರ ಮೇಲೆ ಸೇಡು ತೀರಿಸಿಕೊಳ್ಳುವುದಾಗಿ ಅವರು ಪ್ರತಿಜ್ಞೆ ಮಾಡಿದ್ದಾರೆ.
ಗುರುವಾರ ಕನಿಷ್ಠ 60 ಜನರನ್ನು ಕೊಂದ ಬಾಂಬ್ ಸ್ಫೋಟದ ಹೊಣೆ ಹೊತ್ತಿರುವ ಗುಂಪಿನ ಪ್ರಾದೇಶಿಕ ಬಣವಾದ ಐಸಿಸ್-ಕೆ ಅನ್ನು ಹೇಗೆ ಹೆಡೆಮುರಿ ಕಟ್ಟಬೇಕು ಎಂದು ಯೋಜಿಸುವಂತೆ ಪೆಂಟಗನ್ ಗೆ ಆದೇಶಿಸಿದ್ದೇನೆ ಎಂದಿದ್ದಾರೆ.